ಮದ್ದರಕಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ಐವರ ದುರ್ಮರಣ

| Published : Apr 12 2025, 12:47 AM IST

ಸಾರಾಂಶ

Five killed in horrific road accident on Maddaraki Highway

- ಘತ್ತರಗಿ ಭಾಗ್ಯವಂತಿ ದೇಗುಲದಲ್ಲಿ ಜಾವಳಕ್ಕೆಂದು ಹೊರಟಿದ್ದವರು ಮಸಣ ಸೇರಿದರು

----

ಕನ್ನಡಪ್ರಭ ವಾರ್ತೆ ಶಹಾಪುರ

ಯಾದಗಿರಿ ಸಮೀಪದ ವರ್ಕನಳ್ಳಿ ಗ್ರಾಮದಿಂದ ಕಲಬುರಗಿ ಜಿಲ್ಲೆ ಅಫಜಲ್ಪೂರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಿ ಸನ್ನಿಧಾನದಲ್ಲಿ ಜಾವಳ ಕಾರ್ಯಕ್ರಮಕ್ಕೆಂದು ಪ್ರಯಾಣಿಕರನ್ನು ಕರದೊಯ್ಯುತ್ತಿದ್ದ ಬೊಲೆರೋ ಪಿಕ್‌ ಅಪ್‌ ವಾಹನ ಹಾಗೂ ರಾಜ್ಯ ಸಾರಿಗೆ ಬಸ್‌ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ನಾಲ್ವರು ಸ್ಥಳದಲ್ಲೇ ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಶಹಾಪುರದ ಮದ್ದರಕಿ ಬಳಿ ಸಂಭವಿಸಿದೆ.

ಯಾದಗಿರಿ ಜಿಲ್ಲೆಯ ತಾಲೂಕಿನ ವರ್ಕನಳ್ಳಿ ಗ್ರಾಮದ ತಂಗಮ್ಮ (52), ಸೋಮವ್ವ (55), ಚಾಲಕ ಶರಣಪ್ಪ (30), ಸುನಿತಾ (22) ಮೃತಪಟ್ಟ ದುರ್ದೈವಿಗಳು. ತಂಗಮ್ಮ, ಸೋಮವ್ವ ಹಾಗೂ ಶರಣಪ್ಪ ಸ್ಥಳದಲ್ಲೇ ಮೃತಪಟ್ಟರೆ, ಸುನೀತಾ ಶಹಾಪುರ ಸರ್ಕಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೊಲೆರೋ ಪಿಕ್‌ ಅಪ್ ಗೂಡ್ಸ್ ವಾಹನ‌ ನುಜ್ಜುಗುಜ್ಜಾಗಿದೆ. ವಾಹನದಲ್ಲಿ ನಲವತ್ತಕ್ಕೂ ಹೆಚ್ಚು ಜನ ಇದ್ದರು ಎಂದು ಹೇಳಲಾಗುತ್ತಿದೆ.

ಘಟನೆಯ ವಿವರ: ವರ್ಕನಳ್ಳಿ ಗ್ರಾಮದ ಕಾಶಮ್ಮಳನ್ನು ಕೆಲವು ವರ್ಷಗಳ ಹಿಂದೆ ಯಾದಗಿರಿಯ ಗುರುಮಿಟ್ಕಲ್ ತಾಲೂಕಿನ ದುಪ್ಪಲ್ಲಿ ಗ್ರಾಮದ ಬನ್ನಪ್ಪ ದುಪ್ಪಲ್ಲಿ ಅವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಈ ಕುಟುಂಬ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿತ್ತು. ಈ ದಂಪತಿ ಮಕ್ಕಳಾದ ಭಗವಂತ ಮತ್ತು ಭಾಗ್ಯಶ್ರೀಯ ಜಾವಳವನ್ನು ಘತ್ತರಗಿ ಭಾಗ್ಯವಂತಿ ದೇವಿಯಲ್ಲಿ ತೆಗೆಸಲು ನಿರ್ಣಯಿಸಿದ್ದರು. ಅದರಂತೆ. ಕಾಶಮ್ಮಳ ತವರು ಮನೆಯಾದ ವರ್ಕನಳ್ಳಿಯ ತವರು ಮನೆಯವರಿಗೆ ಮತ್ತು ಆಪ್ತರಿಗೆ ಜಾವಳ ಕಾರ್ಯಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿತ್ತು.

ಗುರುವಾರ ರಾತ್ರಿ ತವರುಮನೆಯವರು ವರ್ಕನಳ್ಳಿಯಿಂದ ಜಾವಳ ಕಾರ್ಯಕ್ಕೆ ಸಂಬಂಧಿಕರು ಮತ್ತು ಅಕ್ಕಪಕ್ಕದವರನ್ನು ಕರೆದುಕೊಂಡು ಬೊಲೆರೋ ಪಿಕ್‌ ಅಪ್ ಗೂಡ್ಸ್ ಗಾಡಿಯಲ್ಲಿ ಘತ್ತರಗಿಗೆ ಹೊರಟಿದ್ದರು. ಮದ್ದರಕಿ ಗ್ರಾಮದ ಬಳಿ ರಾತ್ರಿ 10.30ಕ್ಕೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೊಲೆರೋ ಪಿಕ್‌ ಅಪ್ ನಡುವೆ ಮುಖಾಮಖಿ ಡಿಕ್ಕಿಯಾಗಿ, ಸ್ಥಳದಲ್ಲಿ ಮೂವರು ಜನ ಸಾವನ್ನಪ್ಪಿದ್ದಾರೆ.

25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಎಲ್ಲರನ್ನು ಕಲಬುರ್ಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಡಲಾಗಿದೆ. ಮಕ್ಕಳ ಜಾವಳ ಕಾರ್ಯಕ್ಕೆ ದುಪ್ಪಲ್ಲಿಯಿಂದ ಮತ್ತೊಂದು ವಾಹನದಲ್ಲಿ ಯಾದಗಿರಿಯ ಬಳಿಚಕ್ರ ಬಳಿ ಬರುತ್ತಿದ್ದ ವಾಹನ ಸುದ್ದಿ ತಿಳಿಯುತ್ತಿದ್ದಂತೆಯೇ ಜಾವಳ ಕಾರ್ಯಕ್ರಮ ರದ್ದುಪಡಿಸಿ ಗಾಡಿ ಅಲ್ಲಿಂದಲೇ ವಾಪಸ್ ದುಪ್ಪಲ್ಲಿಗೆ ತೆರಳಿದೆ ಎಂದು ಅವರ ಸಹೋದರ ಸಂಬಂಧಿ ರಾಜು ತಿಳಿಸಿದ್ದಾರೆ.

ವಾಹನದಡಿ ಸಿಲುಕಿದ ಶವವನ್ನು ತೆಗೆಯಲು ಪೊಲೀಸರು ಜೆಸಿಬಿ ಸಹಾಯದಿಂದ ಹೊರ ತೆಗೆದು ಶವಗಳ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮಡಿದವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಟ್ರಾಫಿಕ್ ಜಾಮ್‌: ರಾಜ್ಯ ಹೆದ್ದಾರಿ ಮೇಲೆ ಈ ದುರ್ಘಟನೆ ಸಂಭವಿಸಿದ್ದರಿಂದ, ಉಳಿದ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು. ರಾತ್ರಿ ಒಂದು ಕಿ.ವೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.

ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

.....ಬಾಕ್ಸ್‌.....

ಆಸ್ಪತ್ರೆಗೆ ಶಾಸಕ ತುನ್ನೂರು ಭೇಟಿ

ಆಸ್ಪತ್ರೆಗೆ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಕೆಸ್‌ಆರ್‌ರ್ಟಿಸಿ ಯಾದಗಿರಿ ವಿಭಾಗದ ಡಿಸಿ ಸುನಿಲಕುಮಾರ ಚಂದರಗಿ, ಗ್ರಾಮೀಣ ಪಿಎಸ್ಐ ಶರಣಗೌಡ ನೇಮಣ್ಣನವರ್, ಭೀಮರಾಯನ ಗುಡಿಯ ಪಿಎಸ್ಐ ಮಹಾಂತೇಶ್ ಪಾಟೀಲ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಮುಂತಾದವರಿದ್ದರು.

--

ಶಹಾಪುರ ತಾಲೂಕಿನ ಮದ್ದರಕಿ ಬಳಿ ಬೀದರ್‌- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೆ ಬಸ್ ಮತ್ತು ಬುಲೆರೋ ಪಿಕ್ ಅಪ್ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿ.

11ವೈಡಿಆರ್‌6

-

11ವೈಡಿಆರ್‌7 : ಶಹಾಪುರ ತಾಲೂಕಿನ ಮದ್ದರಕಿ ಬಳಿ ಬೀದರ್‌- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೆ ಬಸ್ ಮತ್ತು ಬುಲೆರೋ ಪಿಕ್ ಅಪ್ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ವಾಹನಗಳನ್ನು ಭೀಮರಾಯನಗುಡಿ ಠಾಣೆಯಲ್ಲಿ ನಿಲ್ಲಿಸಲಾಗಿದೆ.

-

11ವೈಡಿಆರ್‌8 : ರಸ್ತೆ ಅಪಘಾತದಲ್ಲಿ ಮಡಿದ ಕುಟುಂಬಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ ನೀಡಿದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು.