ಮಹಿಳೆ ಸಮಾಜದ ಎಲ್ಲ ಪಾತ್ರಕ್ಕೂ ಸೈ: ಗ್ಲ್ಯಾಡಿಸ್ ಮೆನೆಜಸ್

| Published : May 03 2025, 12:16 AM IST

ಸಾರಾಂಶ

ಮಹಿಳೆಯನ್ನು, ತಾಯಿ, ಮಗಳು, ಸಹೋದರಿ, ಹೆಂಡತಿ, ಅತ್ತೆ ಸೇರಿದಂತೆ ಭೂಮಿ ತಾಯಿಗೂ ಹೊಲಿಕೆ ಮಾಡಲಾಗುತ್ತದೆ.

ಮುಂಡಗೋಡ: ಮಹಿಳೆಯನ್ನು, ತಾಯಿ, ಮಗಳು, ಸಹೋದರಿ, ಹೆಂಡತಿ, ಅತ್ತೆ ಸೇರಿದಂತೆ ಭೂಮಿ ತಾಯಿಗೂ ಹೊಲಿಕೆ ಮಾಡಲಾಗುತ್ತದೆ. ಮಹಿಳೆಯು ಸಮಾಜದ ಎಲ್ಲ ಪಾತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾಳೆ ಎಂದು ಜ್ಯೋತಿ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಗ್ಲ್ಯಾಡಿಸ್ ಮೆನೆಜಸ್ ಹೇಳಿದರು.

ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಆವರಣದಲ್ಲಿ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಸ್ವಸಹಾಯ ಸಂಘಗಳ ಒಕ್ಕೂಟ, ಉತ್ತರ ಕನ್ನಡ ಜಿಲ್ಲೆಯ ಕಲ್ಪವೃಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಯೂನಿಯನ್ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ದಿನ ಹಾಗೂ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಕ್ರೀಡೋತ್ಸವ ಉದ್ಘಾಟಿಸಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರು ಮತ್ತು ಮಹಿಳೆಯರ ಒಕ್ಕೂಟ ಜೊತೆ ಜೊತೆಯಾಗಿ ಈ ವೇದಿಕೆಯಲ್ಲಿರುವುದು, ಮಹಿಳೆ ಮತ್ತು ಪುರುಷರು ಸಮಾನವಾಗಿ ಇರುವುದು ಹೆಮ್ಮೆಯ ವಿಷಯ. ದುಡಿಮೆಯ ಕಾರ್ಯಕ್ಷೇತ್ರದಲ್ಲಿ ಇಬ್ಬರಿಗೂ ಆರೋಗ್ಯ ಸುರಕ್ಷತೆ ಸಮಾನತೆ ಮತ್ತು ಸಬಲೀಕರಣದತ್ತ ನಡೆ ಧ್ಯೆಯದೊಂದಿಗೆ ಈ ದಿನವನ್ನು ಗೌರವಿಸುತ್ತಿರುವುದು ಪ್ರಶಂಸನೀಯ ಎಂದರು.

ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಮಾತನಾಡಿ, ಈ ದಿನಾಚರಣೆಗಳ ಉದ್ದೇಶ ಪ್ರತಿಯೊಬ್ಬ ಮಹಿಳೆ ಮತ್ತು ಕಾರ್ಮಿಕರ ಘನತೆ, ಸಮಾನತೆ ಎತ್ತಿ ಹಿಡಿಯುವುದಾಗಿದೆ, ಪ್ರತಿಯೊಂದು ಕಾರ್ಯಕ್ರಮಗಳನ್ನು ಇದೇ ರೀತಿ ಜಂಟಿಯಾಗಿ ನಡೆಸುವುದರಿಂದ ಹೆಣ್ಣು ಗಂಡು ಎಂಬ ಭೇದ- ಭಾವ ಇರುವುದಿಲ್ಲ ಎಂದರು.

ಲೊಯೋಲ ವಿಕಾಸ ಕೇಂದ್ರ ನಿರ್ದೇಶಕ ಅನಿಲ ಡಿಸೋಜಾ ಪ್ರಾಸ್ತಾವಿಕ ಮಾತನಾಡಿದರು. ಸಿಸಿಎಫ್ ಜನಸ್ಫೂರ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಅಧ್ಯಕ್ಷೆ ಸರೋಜಾ ಚವ್ಹಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಪೊಲೀಸ್‌ ರೇಖಾ ಹುಲ್ಲೆಣ್ಣನವರ, ಸಿಸಿಲಿಯಾ ರೋಡ್ರಿಗಸ್, ಅಲ್ವಿನ್ ಡಿಸೋಜಾ ಶ್ರೀನಿವಾಸ ಪಾಟೀಲ್, ತನ್ವಿರ್ ಮಿರ್ಜಾನಕರ, ಮಂಗಳಾ ಮೊರೆ ಮತ್ತು ನಕ್ಲುಬಾಯಿ ಕೊಕರೆ, ಮಲ್ಲಮ್ಮ ನೀರಲಗಿ, ಲಕ್ಷ್ಮಣ ಮುಳೆ, ಭರ್ಮಣ್ಣ ಚಕ್ರಸಾಲಿ ಮುಂತಾದವರು ಉಪಸ್ಥಿತರಿದ್ದರು. ದೀಪಾ ಮತ್ತು ಸಂಗಡಿಗರಿಂದ ಸಂವಿಧಾನ ನೃತ್ಯರೂಪಕ, ದಾಖುಬಾಯಿ ಮಿಸಳ ಅವರಿಂದ ಸಂವಿಧಾನ ಪ್ರಸ್ಥಾವನೆ ಮಾಡಲಾಯಿತು. ವಿದ್ಯಾ ಸಿದ್ದಿ ನಿರೂಪಿಸಿದರು. ಮಂಜುಳಾ ಲಮಾಣಿ ಸ್ವಾಗತಿಸಿದರು. ಕವಿತಾ ಶಿವನಾಪುರ ವಂದಿಸಿದರು.