ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬರುವಾಗ ಹಳಿಗಳ ಮೇಲೆ ಜಿಗಿದು ಕೇರಳ ಮೂಲದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಜೆಯ ದಟ್ಟಣೆಯ ವೇಳೆ ಈ ಘಟನೆ ನಡೆದಿದ್ದು, ಇದರಿಂದ ಸುಮಾರು 45 ನಿಮಿಷ ರೈಲು ಸಂಚಾರದಲ್ಲಿ ವ್ಯತ್ಯಯವಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಜಾಲಹಳ್ಳಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಅಲೆಪ್ಪಿ ಮೂಲದ ಶ್ಯಾರೋನ್ (23) ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಮೆಟ್ರೋ ರೈಲು ಡಿಕ್ಕಿಯಾಗಿ ಹಾಗೂ ವಿದ್ಯುತ್ ಪ್ರವಹಿಸಿ ತಲೆ ಹಾಗೂ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಗರದ ಅಬ್ಬಿಗೆರೆಯ ಖಾಸಗಿ ಕಂಪನಿಯಲ್ಲಿ ಕೆಲ ತಿಂಗಳಿಂದ ಸಿಎನ್‌ಸಿ ಮಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಶ್ಯಾರೋನ್‌ಗೆ ರಾತ್ರಿ ತಂಗಲು ಕಂಪನಿಯವರೇ ರೂಮ್ ನೀಡಿದ್ದರು. ಶುಕ್ರವಾರ ಸಂಜೆ 7ರ ಸುಮಾರಿಗೆ ಸ್ನೇಹಿತನ ಜತೆಗೆ ಜಾಲಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ಬಂದಿರುವ ಶ್ಯಾರೋನ್, ಮೆಜೆಸ್ಟಿಕ್‌ಗೆ ಟಿಕೆಟ್ ಪಡೆದಿದ್ದ. ಸಂಜೆ 7.15ರ ಸುಮಾರಿಗೆ ಮೆಟ್ರೋ ರೈಲು ಬರುತ್ತಿದ್ದಂತೆ ಏಕಾಏಕಿ ಹಳಿ ಮೇಲೆ ಜಿಗಿದಿದ್ದಾನೆ.
ತುರ್ತು ಬ್ರೇಕ್ ಹಾಕಿದರೂ ರೈಲು ಡಿಕ್ಕಿಯಾಗಿ ಯುವಕನ ತಲೆಗೆ ಪೆಟ್ಟಾಗಿದೆ. ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಗಾಯಾಳುವನ್ನು ರಕ್ಷಿಸಿದ್ದಾರೆ.ಕೂಡಲೇ ರೈಲು ನಿಲ್ದಾಣದ ಸಿಬ್ಬಂದಿ ಶ್ಯಾರೋನ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಪರಿಣಾಮ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಶ್ಯಾರೋನ್ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಿಂಗಳ ಹಿಂದೆಯಷ್ಟೇ ತಂದೆ ತೀರಿಕೊಂಡಿದ್ದರು. ಇದರಿಂದ ಶ್ಯಾರೋನ್ ಕೊಂಚ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ. ಆತನ ಪಾಲಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರೈಲು ಸಂಚಾರ 45 ನಿಮಿಷ ವ್ಯತ್ಯಯ
ಇನ್ನು ಘಟನೆಯಿಂದ ಹಸಿರು ಮಾರ್ಗದಲ್ಲಿ ರೈಲು ಸಂಚಾರ 45 ನಿಮಿಷ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಸಮೀಪದ ನಿಲ್ದಾಣಗಳಲ್ಲಿ ನಾಲ್ಕು ರೈಲುಗಳು ನಿಲುಗಡೆಯಾಗಿದ್ದವು. ಸಂಚಾರ ಪುನಾರಂಭದ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಪ್ರಯಾಣಿಕರು ರೈಲುಗಳಿಂದ ಇಳಿದು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.
ಘಟನೆಯಿಂದಾಗಿ ಕೆಲ ಕಾಲ ಯಶವಂತಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವೆ ಮಾತ್ರ ರೈಲು ಸಂಚಾರವಿತ್ತು. ಜಾಲಹಳ್ಳಿ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ಬಳಿಕ ರಾತ್ರಿ 8ಕ್ಕೆ ನಾಗಸಂದ್ರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ ಪೂರ್ಣ ಮಾರ್ಗದಲ್ಲಿ ಸಂಚಾರ ಪುನಾರಂಭವಾಯಿತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.ಮೂರನೇ ಘಟನೆ
ಮೆಟ್ರೋ ರೈಲು ಆರಂಭದ ನಂತರ ನಡೆದ ಮೂರನೇ ಆತ್ಮಹತ್ಯೆ ಘಟನೆ ಇದಾಗಿದೆ. 2012ರಲ್ಲಿ 16 ವರ್ಷದ ಬಾಲಕ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದನು, ಅದೇ ರೀತಿ 2019ರಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ವಿದ್ಯಾರ್ಥಿ ಇದೇ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಳು.