ಪಾರ್ಟ್‌ ಟೈಮ್‌ ಕೆಲಸ ಸೋಗಲ್ಲಿ ಯುವತಿಗೆ ₹1.07 ಲಕ್ಷ ವಂಚನೆ; ಮೊದಲು ಹಣ ವಾಪಸ್‌ ನೀಡಿ ಬಳಿಕ ಮೋಸ

| Published : Feb 16 2024, 01:57 AM IST

ಸಾರಾಂಶ

ಪಾರ್ಟ್‌ ಟೈಂ ಕೆಲಸದ ಸೋಗಿನಲ್ಲಿ ಸೈಬರ್‌ ವಂಚಕರು ಯುವತಿಯಿಂದ ₹1.07 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾರ್ಟ್‌ ಟೈಂ ಕೆಲಸದ ಸೋಗಿನಲ್ಲಿ ಸೈಬರ್‌ ವಂಚಕರು ಯುವತಿಯಿಂದ ₹1.07 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ಕಿಪೇಟೆ ಮುಖ್ಯರಸ್ತೆಯ ಭುವನೇಶ್ವರಿ(26) ಎಂಬುವವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

ಏನಿದು ದೂರು?:

ದೂರುದಾರೆ ಭುವನೇಶ್ವರಿ ಅವರು ಚಾಮರಾಜಪೇಟೆಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಶೈಲ ಎಂಬ ವ್ಯಕ್ತಿ ಭುವನೇಶ್ವರಿ ಅವರ ವಾಟ್ಸಾಪ್‌ಗೆ ಎಚ್‌.ಆರ್‌.ಮ್ಯಾನೇಜರ್‌ ಎಂಬ ಸಂದೇಶ ಬಂದಿದೆ. ಅದರಲ್ಲಿ ಮನೆಯಲ್ಲಿ ಕುಳಿತು ಮಾಡುವ ಪಾರ್ಟ್‌ ಟೈಮ್‌ ಕೆಲಸ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಭುವನೇಶ್ವರಿ ಅವರು ಒಪ್ಪಿದ ಬಳಿಕ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ಗೂಗಲ್‌ ಫಾರ್ಮ್‌ ಭರ್ತಿ ಮಾಡುವ ಕೆಲಸ ಮಾಡಿಸಿಕೊಂಡು ಭುವನೇಶ್ವರಿಗೆ ₹300 ಹಾಕಿದ್ದಾರೆ.

ಹೆಚ್ಚು ಹಣದ ಆಸೆ ತೋರಿಸಿ ವಂಚನೆ:

ನಂತರ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಒಂದು ಟಾಸ್ಕ್‌ ಇದ್ದು, ₹850 ಹಾಕಿದರೆ, ಅದಕ್ಕೆ ₹250 ಸೇರಿಸಿ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಭುವನೇಶ್ವರಿ ಅವರು ₹850 ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ₹1,100 ನೀಡಲಾಗಿದೆ. ಇದೇ ರೀತಿ ಭುವನೇಶ್ವರಿ ಅವರಿಂದ ವಿವಿಧ ಹಂತಗಳಲ್ಲಿ ಒಟ್ಟು ₹1.07 ಲಕ್ಷ ಹಾಕಿಸಿಕೊಳ್ಳಲಾಗಿದೆ. ಬಳಿಕ ಈ ಹಣವನ್ನು ವಾಪಾಸ್‌ ಕೇಳಿದ್ದಕ್ಕೆ ₹1.40 ಲಕ್ಷ ಹಾಕಿದರೆ ₹1.70 ಲಕ್ಷ ವಾಪಾಸ್‌ ಕೊಡುವುದಾಗಿ ಹೇಳಿದ್ದಾರೆ.

ಈ ವೇಳೆ ಎಚ್ಚೆತ್ತಕೊಂಡ ಭುವನೇಶ್ವರಿ ಮತ್ತೆ ಹಣ ಹಾಕುವ ಗೋಜಿಗೆ ಹೋಗಿಲ್ಲ. ತಾನು ಸೈಬರ್‌ ವಂಚಕರ ಬಲೆಗೆ ಬಿದ್ದಿರುವುದು ಅರಿವಾಗಿ ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---