ಇಫಿ (IFFI 2026) ಅಂಗವಾಗಿ ಗೋವಾದಲ್ಲಿ ನಡೆದ 20ನೇ ಆವೃತ್ತಿಯ ವೇವ್ಸ್ ಫಿಲ್ಮ್ ಬಜಾರ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 54 ದೇಶಗಳಿಂದ 2,300ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ ಪಣಜಿ (ಗೋವಾ):
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಗೋವಾದಲ್ಲಿ ಆಯೋಜಿಸಲಾಗಿದ್ದ 20ನೇ ಆವೃತ್ತಿಯ ವೇವ್ಸ್ ಫಿಲ್ಮ್ ಬಜಾರ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರಭಾತ್, ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉತ್ಸವದ ನಿರ್ದೇಶಕ ಅಶುತೋಷ್ ಮತ್ತು ಫಿಲ್ಮ್ ಬಜಾರ್ನ ವಿಶೇಷ ಕರ್ತವ್ಯಾಧಿಕಾರಿ ಶ್ರೀರಾಮ್ ಅವರು ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿಯ ಉತ್ಸವದ ಪ್ರಮುಖ ಫಲಿತಾಂಶಗಳ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.ಈ ಬಾರಿಯ ಫಿಲ್ಮ್ ಬಜಾರ್ಗೆ ವಿಶ್ವದಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 54 ದೇಶಗಳಿಂದ ಸುಮಾರು 2,300 ಪ್ರತಿನಿಧಿಗಳು ಹಾಗೂ 471 ಖರೀದಿದಾರರು ಪಾಲ್ಗೊಂಡಿದ್ದರು. ಈ ಬಾರಿ ರಷ್ಯಾ ಪಾಲುದಾರ ರಾಷ್ಟ್ರವಾಗಿ ದೊಡ್ಡ ಮಟ್ಟದಲ್ಲಿ ಭಾಗವಹಿಸಿದ್ದರೆ, 12 ರಾಜ್ಯಗಳ ಪೆವಿಲಿಯನ್ಗಳು ಮತ್ತು 4 ದೇಶಗಳ ಪೆವಿಲಿಯನ್ಗಳು ಉತ್ಸವದ ಮೆರುಗು ಹೆಚ್ಚಿಸಿದ್ದವು. ಇದರೊಂದಿಗೆ ವ್ಯೂಯಿಂಗ್ ರೂಮ್ನಲ್ಲಿ ಕಿರುಚಿತ್ರಗಳು ಸೇರಿದಂತೆ 36 ಯೋಜನೆಗಳನ್ನು ಪ್ರದರ್ಶಿಸಲಾಗಿದ್ದು, ನಾಲ್ಕು ದಿನಗಳ ಕಾಲ 24 ಸಂವಾದ ಗೋಷ್ಠಿಗಳು ನಡೆದಿವೆ.
ವಾಣಿಜ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಈ ಬಾರಿ ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಸಹ-ನಿರ್ಮಾಣ ಮಾರುಕಟ್ಟೆಯಲ್ಲಿ ಸುಮಾರು 220 ಬಿ2ಬಿ ಸಭೆಗಳು ನಡೆದಿದ್ದು, ಭಾರತ ಮತ್ತು ಚಿಲಿ ನಡುವೆ ಎರಡು ಸಹ-ನಿರ್ಮಾಣ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವೇವ್ಸ್ ಅಡಿಯಲ್ಲಿ ತೆರೆಯಲಾಗಿದ್ದ 10 ಸ್ಟಾರ್ಟ್ಅಪ್ ಮಳಿಗೆಗಳಲ್ಲಿ 300ಕ್ಕೂ ಹೆಚ್ಚು ವಾಣಿಜ್ಯ ಸಭೆಗಳು ನಡೆದಿದ್ದು, ಸುಮಾರು 14 ಒಪ್ಪಂದಗಳು ಅಂತಿಮ ಹಂತದಲ್ಲಿವೆ. ನೆಟ್ಫ್ಲಿಕ್ಸ್ ಮತ್ತು ಡಾಲ್ಫಿನ್ ಎಐ ತಂತ್ರಜ್ಞಾನ ಮಳಿಗೆಗಳು ವಿಶೇಷ ಆಕರ್ಷಣೆಯಾಗಿದ್ದವು. ಇದೇ ವೇಳೆ ಡಾಲ್ಫಿನ್ ಎಐ ಸಂಸ್ಥೆಯು ತನ್ನ ಹೊಸ ಎಐ ಸ್ಟುಡಿಯೋವನ್ನು ಅನಾವರಣಗೊಳಿಸಿತು. ಅಲ್ಲದೆ, ಎನ್ಎಫ್ಡಿಸಿ ವತಿಯಿಂದ ಮೂರು ಚಲನಚಿತ್ರ ಯೋಜನೆಗಳಿಗೆ ಒಟ್ಟು 20,000 ಅಮೆರಿಕನ್ ಡಾಲರ್ ಅನುದಾನ ನೀಡಲಾಗಿದ್ದು, ಪ್ರಸಾದ್ ಲ್ಯಾಬ್ಸ್ ಹಾಗೂ ಮುಖೇಶ್ ಛಾಬ್ರಾ ಕಾಸ್ಟಿಂಗ್ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಪೋಸ್ಟ್-ಪ್ರೊಡಕ್ಷನ್ ನೆರವು ನೀಡಿವೆ.ಸಿನಿಮಾ ನಿರ್ಮಾಣದಲ್ಲಿ ಎಐ ಬಳಕೆಯಿಂದ ತಂತ್ರಜ್ಞರ ಉದ್ಯೋಗಕ್ಕೆ ತೊಂದರೆಯಾಗಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಹೊಸ ತಂತ್ರಜ್ಞಾನವನ್ನು ನಾವು ಸ್ವಾಗತಿಸಬೇಕಿದೆ ಎಂದರು. ಮೂಕಿ ಚಿತ್ರಗಳಿಂದ ಟಾಕಿ ಚಿತ್ರಗಳು ಬಂದಾಗಲೂ ಇಂತಹದೇ ಆತಂಕವಿತ್ತು, ಆದರೆ ಎಐ ಕೇವಲ ಒಂದು ತಾಂತ್ರಿಕ ಸಾಧನವಷ್ಟೇ. ಅದು ಮನುಷ್ಯನ ಭಾವನೆ ಮತ್ತು ಸೃಜನಶೀಲತೆಗೆ ಪರ್ಯಾಯವಾಗಲು ಸಾಧ್ಯವಿಲ್ಲ, ಅಂತಿಮವಾಗಿ ಉತ್ತಮ ಕಥೆಯೇ ಪ್ರೇಕ್ಷಕರನ್ನು ಗೆಲ್ಲುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಫಿಲ್ಮ್ ಬಜಾರ್ನಲ್ಲಿ ರೂಪುಗೊಂಡ ಆಟಂ, ಬಾಫ್ತಾ ಪ್ರಶಸ್ತಿ ವಿಜೇತ ಬೂಂಗ್ ಹಾಗೂ ಆಸ್ಕರ್ಗೆ ಪ್ರವೇಶ ಪಡೆದ ನಾಗಾಲ್ಯಾಂಡ್ ಚಿತ್ರಗಳ ಯಶಸ್ಸನ್ನು ಅಧಿಕಾರಿಗಳು ಸ್ಮರಿಸಿದರು,. ಜೊತೆಗೆ, ಇಫಿ ಆ್ಯಪ್ನಲ್ಲಿ ಟಿಕೆಟ್ ಬುಕಿಂಗ್ ಕುರಿತು ಕೇಳಿಬಂದ ತಾಂತ್ರಿಕ ದೋಷಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂದಿನ ಆವೃತ್ತಿಯ ವೇಳೆಗೆ ಇವುಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗುವುದು ಎಂದು ಉತ್ಸವದ ನಿರ್ದೇಶಕರು ಭರವಸೆ ನೀಡಿದರು.