ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಅಕ್ಷಯ ತೃತೀಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಅಕ್ಷಯ ತೃತೀಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆದವು.

ಶ್ರೀ ಕ್ಷೇತ್ರದಲ್ಲಿ ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಮಾದೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ದೂಪದ ಸೇವೆ, ಮಹಾಮಂಗಳಾರತಿ ಕೈಂಕರ್ಯಗಳು ಧಾರ್ಮಿಕವಾಗಿ ನಡೆದವು. ಹರಕೆ ಹೊತ್ತ ಭಕ್ತರಿಂದ ಬೆಳ್ಳಿ ರಥೋತ್ಸವ ಹಾಗೂ ಮಾದೇಶ್ವರ ಉತ್ಸವ, ಹುಲಿ ವಾಹನ ಉತ್ಸವ, ಪಂಜಿನ ಸೇವೆ ಹಾಗೂ ಸುಡು ಬಿಸಿಲನ್ನು ಲೆಕ್ಕಿಸದೆ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ ಸಹ ನಡೆಯಿತು.

ಅಮಾವಾಸ್ಯೆಗೆ ಮಾದಪ್ಪನ ಬೆಟ್ಟದಲ್ಲಿ ಭಕ್ತರ ದಂಡು:ಶ್ರೀಕ್ಷೇತ್ರ ಮಾದಪ್ಪನ ಸನ್ನಿಧಿಯಲ್ಲಿ ಬಿರು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ಭಕ್ತಾದಿಗಳು ದೈವ ದರ್ಶನ ಪಡೆದರು, ಹಿರಿಯ ನಾಗರಿಕರಿಗೂ ಸಹ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು, ರಾಜಗೋಪುರ ಮಾರ್ಗವಾಗಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಲಂಬಡಿ ಬಸವನಿಗೆ ಪೂಜೆ:

ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಂಥ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆದು ನಂತರ ಆಲಂಬಡಿ ಬಸವನ ಪೂಜೆ ಸಲ್ಲಿಸಿ ಭಕ್ತರಿಂದ ಹಾಲು ಹಾಗೂ ಎಣ್ಣೆ ಅಭಿಷೇಕ ಮಾಡಿ ದವಸ ಧಾನ್ಯಗಳನ್ನು ಸಹ ಬಸವನ ಮೇಲೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸಿ ತಾವು ಜಮೀನಿನಲ್ಲಿ ಬೆಳೆಯುವ ದವಸ ಧಾನ್ಯಗಳು ಇನ್ನಷ್ಟು ಸಮೃದ್ಧಿಯಾಗಿ ಬೆಳೆಯಲಿ, ಮಳೆ ಬೆಳೆ ಸಮೃದ್ಧಿ ಆಗಲಿ ಎಂದು ಮಾದಪ್ಪನಲ್ಲಿ ಭಕ್ತ ಸಮೂಹ ನಿವೇದನೆ ಮಾಡಿಕೊಂಡಿತು.

ಬಿಗಿ ಪೊಲೀಸ್ ಬಂದೋಬಸ್ತ್ :

ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಮತ್ತು ತಮಿಳುನಾಡಿನಿಂದ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಿಗಿ ಪಹರೆಯನ್ನು ಏರ್ಪಡಿಸಲಾಗಿತ್ತು.

ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ಬಿರು ಬಿಸಿಲು ಸಹ ಲೆಕ್ಕಿಸದೆ ಬರುತ್ತಿರುವ ಮಾದಪ್ಪನ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಉರುಳು ಸೇವೆ ಮಾಡುವ ಭಕ್ತಾದಿಗಳಿಗೆ ದೇವಾಲಯದ ಸುತ್ತಲೂ ನೀರು ಟ್ಯಾಂಕರ್ ನಲ್ಲಿ ಹಾಕುವ ಮೂಲಕ ಸೂಕ್ತ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ವಿಶೇಷ ದಾಸೋಹ ವ್ಯವಸ್ಥೆಯನ್ನು ಸಹ ಭಕ್ತಾದಿಗಳಿಗೆ ಕಲ್ಪಿಸಲಾಗಿತ್ತು.

ಈ ವೇಳೆ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ಪ್ಲಾಸ್ಟಿಕ್ ತ್ಯಜಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ. ರಘು ಮನವಿ ಮಾಡಿದರು.