ಸಾರಾಂಶ
ಎರಡೂ ಕೈಗಳನ್ನು ಕಳೆದುಕೊಂಡೂ ಈಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ದಾಖಲೆ ಮಾಡಿರುವ ವಿಶ್ವಾಸ್ ಇದೀಗ ಅರಬೀ ಎಂಬ ಸಿನಿಮಾದ ನಾಯಕನಾಗಿದ್ದಾರೆ.
ರಾಜ್‌ಕುಮಾರ್ ನಿರ್ದೇಶನದ ‘ಅರಬ್ಬೀ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎರಡೂ ಕೈಗಳಿಲ್ಲದ ಅಂತಾರಾಷ್ಟ್ರೀಯ ಮಟ್ಟದ ಈಜುಗಾರ ಕೆ ಎಸ್ ವಿಶ್ವಾಸ್ ಈ ಸಿನಿಮಾದ ನಾಯಕ. ಮಾಜಿ ಪೊಲೀಸ್ ಅಧಿಕಾರಿ, ಹಾಲಿ ಬಿಜೆಪಿ ಮುಖಂಡ ಅಣ್ಣಾಮಲೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ವಿಶ್ವಾಸ್, ‘ನನಗೆ ನಟನೆ ಗೊತ್ತಿಲ್ಲ. ಛಾಯಾಗ್ರಾಹಕರು ಎಮೋಶನ್ಸ್ ಬರಲಿ ಅಂದರೆ ಸಿಟ್ಟು ಬರುತ್ತಿತ್ತು. ಈ ಸಿನಿಮಾದಲ್ಲಿ ನನ್ನ ಬದುಕಿನ ನೋವು, ಸಾಧನೆಯ ಹಾದಿಯ ಅಂಶಗಳೂ ಇವೆ. ಈಜುಗಾರನಾಗಿಯೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ದಿನಚರಿಯಿಂದ ಹಿಡಿದು ಸಮಾಜ ನಮ್ಮಂಥವರನ್ನು ನೋಡುವ ರೀತಿಯನ್ನೂ ಸಿನಿಮಾ ಪ್ರತಿಬಿಂಬಿಸುತ್ತದೆ’ ಎಂದರು. ನಿರ್ದೇಶಕ ರಾಜ್‌ಕುಮಾರ್, ‘ ಅರಬ್ಬೀ ಶೀರ್ಷಿಕೆ ವಿಶ್ವಾಸ್ ಬದುಕಿನ ರೂಪಕದಂತಿದೆ. ನಮ್ಮ ಈ ಸಿನಿಮಾ ಗೋವಾ ಸಿನಿಮೋತ್ಸವಕ್ಕೆ ಆಯ್ಕೆಯಾಗಿ ಕೊನೆಯ ಹಂತದಲ್ಲಿ ಪ್ರಶಸ್ತಿ ತಪ್ಪಿಹೋಗಿತ್ತು’ ಎಂದರು. ಚೇತನ್ ಸಿ.ಎಸ್ ಚಿತ್ರದ ನಿರ್ಮಾಪಕರು. ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಸಂಗೀತ ನಿರ್ದೇಶಕ ಕಂಬದ ರಂಗಯ್ಯ, ಫಿಲಂ ಚೇಂಬರ್ ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಸಾರಥಿ, ಕಲಾವಿದರಾದ ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಸುದ್ದಿಗೋಷ್ಠಿಯಲ್ಲಿದ್ದರು.