ಸಾರಾಂಶ
ಟಿ ಎನ್ ಸೀತಾರಾಂ
ಅಪರ್ಣಾಳನ್ನು ಮೊದಲು ನೋಡಿದ್ದು ಪುಟ್ಟಣ್ಣ ಕಣಗಾಲರ ಆಫೀಸಿನಲ್ಲಿ. ಪುಟ್ಟಣ್ಣ ‘ಮಸಣದ ಹೂವು’ ಸಿನಿಮಾ ಮಾಡುತ್ತಿದ್ದರು. ಒಂದು ದಿನ ಅವರು, ‘ನಾಳೆ ಒಬ್ಬರನ್ನು ಕರೆಸುತ್ತೇನೆ, ಸಿನಿಮಾದ ಪಾತ್ರಕ್ಕೆ ಆಕೆ ಸರಿ ಹೊಂದುತ್ತಾಳೆಯೇ ನೋಡಿ’ ಎಂದರು. ಮರುದಿನ ಪುಟ್ಟಣ್ಣನ ‘ಹೆಡ್ಡನಹಟ್ಟಿ’ ಎಂಬ ಆಫೀಸಿಗೆ 17ರ ವಯಸ್ಸು ಇರಬಹುದಾದ ಪುಟ್ಟ ಹುಡುಗಿಯೊಬ್ಬಳು ಬಂದಳು. ಬೆರಗು ಗಣ್ಣು. ಸ್ಪಷ್ಟ ಧ್ವನಿ. ಪುಟ್ಟಣ್ಣ ಕೊಟ್ಟ ಡೈಲಾಗನ್ನು ಸೊಗಸಾಗಿ ಓದಿದಳು. ಆ ಚಿತ್ರಕ್ಕೆ ಆಯ್ಕೆಯಾದಳು. ಆದರೆ ಸಿನಿಮಾ ಅರ್ಧ ಆಗುವಾಗ ಪುಟ್ಟಣ್ಣ ಹೋಗಿಬಿಟ್ಟರು. ಅಪರ್ಣಾ ಕೂಡ ಸ್ವಲ್ಪ ಸಮಯ ಅಮೆರಿಕಾಗೆ ಹೋಗಿದ್ದಳು. ಮತ್ತೆ ವಾಪಸ್ ಬರುವ ವೇಳೆಗೆ ನಾನು ಧಾರಾವಾಹಿ ಪ್ರಪಂಚದಲ್ಲಿ ಬ್ಯುಸಿಯಾಗಿದ್ದೆ. ಒಮ್ಮೆ ಭೇಟಿ ಆಗಿ ಯಾವುದಾದರೂ ಪಾತ್ರ ಕೊಡಿ ಎಂದು ಕೇಳಿದ್ದಳು. ನಾನು ಸರಿ ಎಂದಿದ್ದೆ.
ಆಕೆ ನಿರೂಪಣೆ ಶುರು ಮಾಡಿದಳು.
ಆಕೆಗೆ ಎಂಥಾ ಶ್ರದ್ಧೆ ಎಂದರೆ ನಿರೂಪಣೆಗೆ ಹೊಸ ಗತ್ತು ತಂದಳು. ನಿರೂಪಣೆಯ ಟ್ರೆಂಡ್ ಬದಲಾಯಿಸಿದಳು. ಮಾತಿನಿಂದ, ನಿರೂಪಣೆಯಿಂದ, ಧ್ವನಿಯಿಂದ ಕಾರ್ಯಕ್ರಮಕ್ಕೆ ಒಂದು ವ್ಯಕ್ತಿತ್ವ ಕೊಡುತ್ತಿದ್ದಳು. ಹಾಗಾಗಿಯೇ ರಾಜಕಾರಣಿಗಳೆಲ್ಲಾ ಅಪರ್ಣಾ ನಿರೂಪಣೆ ಇರಲಿ ಎಂದು ಹೇಳುತ್ತಿದ್ದದ್ದನ್ನು ನಾನು ಗಮನಿಸಿದ್ದೆ. ಭಾಷಾ ಸ್ಪಷ್ಟತೆಯಿಂದಲೇ ಅವಳು ಕನ್ನಡವನ್ನು ಮತ್ತಷ್ಟು ಮಧುರವಾಗಿಸಿದಳು. ಕನ್ನಡ ಪದಗಳನ್ನು ಕನ್ನಡಿಗರ ಹೃದಯಕ್ಕೆ ಇಳಿಸಿದಳು.
ಮುಕ್ತಾ ಧಾರಾವಾಹಿ ಮಾಡುವಾಗ ನಾನು ಆಕೆಯ ಬಳಿ ಸಂಕೋಚದಿಂದಲೇ ನನ್ನ ಸಿಎಸ್‌ಪಿ ಪಾತ್ರದ ಹೆಂಡತಿ ಪಾತ್ರ ಮಾಡುತ್ತೀಯಾ ಎಂದು ಕೇಳಿದ್ದೆ. ಆಕೆ ಒಪ್ಪಿದ್ದಳು. ಆಕೆಯ ಭಾಷಾ ಸ್ಪಷ್ಟತೆಯನ್ನು ನಾನು ಅಭಿಮಾನಿಸುತ್ತಿದ್ದೆ. ಆದರೆ ಆಕೆ ಡೈಲಾಗ್‌ಗಳನ್ನು ನನ್ನನ್ನೇ ಒಮ್ಮೆ ಓದಿ ಹೇಳಿ ಎಂದು ಹೇಳಿಸಿಕೊಳ್ಳುವಷ್ಟು ವಿನಯವಂತಳಾಗಿದ್ದಳು. ಆಕೆಯ ವ್ಯಕ್ತಿತ್ವವೇ ಪ್ರೀತಿಯಿಂದ ಕೂಡಿತ್ತು. ಯಾವಾಗ ಸಿಕ್ಕರೂ ಆಕೆಯ ಕಣ್ಣಲ್ಲಿ ಸಹಾನುಭೂತಿ ಇರುತ್ತಿತ್ತು.
ಅವಳು ಹೋದಲ್ಲೆಲ್ಲಾ ಕನ್ನಡವೂ ಇರುತ್ತಿತ್ತು. ಫೋನ್ ಎತ್ತಿದರೆ ಆಕಡೆಯಿಂದ ಕೇಳಿ ಬರುವ ಹಲೋ ಟ್ಯೂನಲ್ಲೂ ಆಕೆಯ ಧ್ವನಿ ಇರುತ್ತಿತ್ತು. ಮೆಟ್ರೋದಲ್ಲಿ ಕೇಳಿಸುವ ದನಿಯಲ್ಲಿಯೂ ಅಪರ್ಣಾಳ ಅಕ್ಕರೆ ಇರುತ್ತಿತ್ತು. ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿ ಕೇಳಿ ಬರುವ ಕನ್ನಡದ ದನಿ ಆಕೆಯದ್ದೇ ಆಗಿರುತ್ತಿತ್ತು. ಅವಳು ಕನ್ನಡದ ಪದಗಳಿಗೆ ಮಾಧುರ್ಯ ಕೊಡುತ್ತಿದ್ದಳು. ಮಾತಿಗೆ ಜೀವ ಕೊಡುತ್ತಿದ್ದಳು.
ಕೊನೆಯ ಸಲ ಅಪರ್ಣಾಳನ್ನು ನೋಡಲು ಹೋದಾಗ ಆಕೆಯ ಪತಿ ನಾಗರಾಜ ವಸ್ತಾರೆ ಸಿಕ್ಕಿದರು. ‘ಅವಳಿಗೆ ನಾನಿದ್ದೆ, ನನಗೆ ಅವಳಿದ್ದಳು, ನಾಳೆಯಿಂದ ನಾನು ಒಂಟಿ’ ಎಂದರು. ಅವರ ಧ್ವನಿಯಲ್ಲಿದ್ದ ಆ ವಿಷಾದ ನನ್ನನ್ನು ಕಲಕುತ್ತಿದೆ. ಅಪರ್ಣಾಳ ಅಕ್ಕರೆಯ ದನಿಯ ಮೌನ ನನ್ನನ್ನು ಕಾಡುತ್ತಿದೆ.