ಸಾರಾಂಶ
ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ಕ್ರಿಸ್‌ಮಸ್ ಟ್ರೀ ಆಕರ್ಷಣೆಯ ಕೇಂದ್ರಬಿಂದು. ಇದರ ವಿಶೇಷತೆ ಕುರಿತ ಬರಹ.
- ಸವಿತಾ ನಾಗೇಶ್, ನ್ಯೂಜೆರ್ಸಿ
ಮೈ ಮನಸ್ಸಿಗೆ ಹಿತವಾದ ಸುಂದರ ಸಂಜೆ. ಹಿಂದಿನ ದಿನ ಬಿದ್ದ ಆ ಮಳೆ ಇಳೆಯನ್ನು ತಂಪುಗೊಳಿಸಿತ್ತಾದರೂ, ಬೆಳಗಿನ ಸುಡು ಬಿಸಿಲು ಭೂತಾಯಿಯನ್ನು ಬೆಚ್ಚಗೆ ಮಾಡಿತ್ತು. ಕೊರೆವ ಚಳಿಯಿಲ್ಲದಿದ್ದರೂ ಮೈಮರೆಯುವ ಹಾಗಿರಲಿಲ್ಲ. ಬೆಚ್ಚಗಿನ ಉಡುಪು ಬೇಕೇ ಬೇಕು. ಕ್ರಿಸ್ತನ ಆಗಮನ ಇನ್ನೂ ತಿಂಗಳಿದೆ ಎನ್ನುವಾಗಲೇ ಇಲ್ಲಿನ ಜನರಿಗೆ ಸ್ನೇಹ ಕೂಟಗಳು, ಸಂಭ್ರಮದ ಆಚರಣೆಗಳು, ಪ್ರೀತಿಯ ಉಡುಗೊರೆಗಳ ವಿನಿಮಯ ಪ್ರಾರಂಭ. ಇವರ ನಗು ನಲಿವುಗಳನ್ನು, ನಗರದ ತುಂಬ ಬೆಳಗುತ್ತಿರುವ ದೀಪದ ಅಲಂಕಾರಗಳನ್ನು ನೋಡಲು ಕಣ್ಣೆರಡು ಸಾಲದು!ಹೌದು, ಈಗ ನಾನಿರುವುದು ಅಮೇರಿಕದಲ್ಲಿ!ಇಲ್ಲಿನ ಕ್ರಿಸ್‌ಮಸ್ ಹಬ್ಬದ ಸಂಭ್ರಮ, ಮೈನಸ್ ಡಿಗ್ರಿಗೆ ಹೋಗುವ ಹವಾಮಾನ, ಹಿಮಮಳೆಯ ಅನುಭವವನ್ನು ಪಡೆಯುವ ಉದ್ದೇಶದಿಂದ ಕಳೆದ ಬೇಸಿಗೆಯಲ್ಲಿ ಇಲ್ಲಿರುವ ಮಗಳ ಮನೆಗೆ ಒಬ್ಬಳೇ ಬಂದಿಳಿದಿದ್ದೆ.
ಈ ದೇಶದ ಜನ ‘ಥ್ಯಾಂಕ್ಸ್ ಗಿವಿಂಗ್’ ಮುಗಿಯುತ್ತಿದ್ದಂತೆ ಕ್ರಿಸ್ತನನ್ನು ಸ್ವಾಗತಿಸುತ್ತಾರೆ. ಕ್ರಿಸ್‌ಮಸ್‌ನ ಸಂಭ್ರಮಾಚರಣೆಗೆ ನ್ಯೂಯಾರ್ಕ್ ನಗರ, ಜನರು ಸಜ್ಜಾಗಿಬಿಡುತ್ತಾರೆ. ಕಣ್ಮನ ಸೆಳೆಯುವ ಬೃಹತ್ ಕಟ್ಟಡಗಳು, ಅವುಗಳಿಗೆ ದೀಪಗಳ ಅಲಂಕಾರ, ಕಂಗೊಳಿಸುವ ಕ್ರಿಸ್‌ಮಸ್ ಟ್ರೀಗಳ ಸೌಂದರ್‍ಯ, ರಸ್ತೆ ತುಂಬ ಸಾಂತಾಕ್ಲಾಸ್ ವೇಷಧಾರಿಗಳ ಕಲರವ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಝಗಮಗಿಸೋ ರಸ್ತೆಗಳ ಇಕ್ಕೆಲಗಳ ಅಂಗಡಿಗಳಲ್ಲಿ ಜನಸಾಗರ, ಬ್ಲಾಕ್ ಪ್ರೈಡೇ ಪ್ರಯುಕ್ತ ಆಫರ್‌ಗಳ ಆರ್ಭಟ. ರಸ್ತೆ ರಸ್ತೆಗಳೂ ಸುಂದರವಾಗಿ ಅಲಂಕೃತಗೊಂಡು ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತವೆ. ಮಕ್ಕಳು ಮುದುಕರಾದಿಯಾಗಿ ಎಲ್ಲರೂ ಈ ಸಂಭ್ರಮದಲ್ಲಿ ಭಾಗಿ. ಸಬ್‌ವೇ ಇಳಿದು ಮೊದಲು ನಾವು ಮೊದಲು ಹೋದದ್ದು ಬ್ರ್ಯಾಂಟ್ ಪಾರ್ಕ್‌ಗೆ. ಅಬ್ಬಾ! ಅದೇನು ಜನ ಅದೆಷ್ಟು ನಗು. ವಿಂಟರ್ ವಿಲೇಜ್ ಥೀಮ್‌ನೊಂದಿಗೆ ಕುಡಿಯಲು ತಿನ್ನಲು ಸಾಲುಸಾಲಾದ ಮಳಿಗೆಗಳನ್ನು ಹಾಕಿದ್ದರು. ಅವುಗಳ ಪ್ರಯೋಜನಗಳನ್ನು ಪಡೆಯುತ್ತ, ವ್ಯವಸ್ಥೆಗೊಳಿಸಿದ್ದ ಈವೆಂಟ್‌ಗಳಲ್ಲಿ ಭಾಗಿಯಾಗುತ್ತ ಜನ ನಲಿದಾಡುತ್ತಿದ್ದರು. ನಾವೇನೂ ಕಮ್ಮಿಯಿಲ್ಲ ಎನ್ನುತ್ತಾ ತಮ್ಮ ಯಜಮಾನನೊಟ್ಟಿಗೆ ಜಂಭದ ಹೆಜ್ಜೆಗಳನ್ನು ಹಾಕುತ್ತಿದ್ದ ಮುದ್ದಾದ ಶ್ವಾನಗಳೂ ಇದ್ದವು. ಅವುಗಳನ್ನೂ ಸುಂದರವಾಗಿ ಅಲಂಕರಿಸಿ, ಬೆಚ್ಚಗಿನ ಬಟ್ಟೆ ಹಾಕಿ ಕರೆತಂದಿದ್ದರು. ಇಲ್ಲಿ ಸಾಕು ಪ್ರಾಣಿಗಳನ್ನು ಮುಟ್ಟಲು ಮಾಲೀಕರ ಅನುಮತಿ ಪಡೆಯಬೇಕು. ಹಾಗಾಗಿ ನೋಡಿ ಆನಂದಿಸಿದೆ. ಪಾರ್ಕಿನಲ್ಲಿ ಐಸ್ ಸ್ಕೇಟಿಂಗ್ ಮುಖ್ಯ ಆಕರ್ಷಣೆ. ಸ್ಕೇಟಿಂಗ್ ಗ್ರೌಂಡ್‌ನಲ್ಲಿ ಮಕ್ಕಳನ್ನು ಆಡಿಸುತ್ತಿದ್ದ ತಂದೆ ತಾಯಿ ತಾತ ಅಜ್ಜಿಯರು, ತಪ್ಪು ಹೆಜ್ಜೆಗಳನ್ನಿಡುತ್ತ ಆಡುತ್ತಿದ್ದ ಮಕ್ಕಳನ್ನು ನೋಡುವುದೇ ಚಂದ! ಪ್ರೇಮ ನಿವೇದನೆಗಳು, ದಂಪತಿಯ ಸರಸ ಸಲ್ಲಾಪ, ಸ್ನೇಹಿತರ ಹರಟೆ ಎಲ್ಲ ಒಂದೇ ಚೌಕಟ್ಟಿನಲ್ಲಿ ಕಾಣಸಿಗುತಿತ್ತು. ಐಸ್ ನೆಲದ ಮೇಲಿನ ಸ್ಕೇಟಿಂಗ್‌ಗೆ ವಿಶೇಷ ತರಬೇತಿ ಅವಶ್ಯಕ. ಅಂಥಾ ತರಬೇತಿ ಪಡೆದ ಹಲವರು, ಸ್ಕೇಟಿಂಗ್‌ನ ಚಕ್ರಗಳ ಮೇಲೆ ನಿಂತು, ಸುಲಲಿತವಾಗಿ ಗ್ರೌಂಡ್ ತುಂಬಾ ಸಾಗುತ್ತ ತಮ್ಮದೇ ಲೋಕದಲ್ಲಿದ್ದರು. ಕೊರೆವ ಚಳಿಯಲ್ಲಿ ಐಸ್ ಸ್ಕೇಟಿಂಗ್ ಆಡುವುದೂ ಒಂದು ಸಾಧನೆಯೆ. ಅಲ್ಲಿಂದ ಮುಂದೆ ಸೆಪೆರ ಎಂಬ ಬೃಹತ್ ಪ್ರಸಾದನಗಳ ಮಳಿಗೆಗೆ ಮಗಳು ಕರೆದುಕೊಂಡು ಹೋದಳು. ಚಿಕ್ಕಪುಟ್ಟ ತುಟಿ ಬಣ್ಣಗಳ ಕಡ್ಡಿಗಳಿಗೆ, ಬ್ರ್ಯಾಂಡೆಡ್ ಹಾಗೂ ಚಿನ್ನದ ಹೊದಿಕೆಗಳಿದ್ದವು. ಅವುಗಳ ಮೇಲೆ 45-50 ಡಾಲರ್ ಎಂದು ದರವನ್ನು ಎಂದು ನಮೂದಿಸಿದ್ದರು. ಪ್ರಸಿದ್ಧ ಮರ್ಸಿ ಶಾಪಿಂಗ್ ಬಿಲ್ಡಿಂಗ್ ನೋಡಿದಾಗ ದಂಗು ಬಡಿದ ಹಾಗಾಯಿತು. ಅಲ್ಲಿಂದ 5ನೇ ಅವೆನ್ಯೂನಲ್ಲಿರುವ ಸ್ಯಾಕ್ಸ್ ಎಂಬ ಬೃಹತ್ ವ್ಯಾಪಾರೀ ಕಟ್ಟಡದೆಡೆಗೆ ನಮ್ಮ ನಡಿಗೆ. ಕ್ರಿಸ್‌ಮಸ್ ಸಮಯ ಎಂದರೆ ಇಲ್ಲಿನ ದೊಡ್ಡ ಗೋಡೆಯ ಮೇಲೆ ಲಘು ವಾದ್ಯಸಂಗೀತ ಹಾಗೂ ದೀಪದ ಶೋ ಇರುತ್ತದೆ. ಸೂರ್ಯ, ಚಂದ್ರ, ಪತಂಗ, ಹೂಬಳ್ಳಿ ಹಾಗೂ 12 ರಾಶಿ ಚಿತ್ರಗಳ ಅಳವಡಿಕೆ ಈ ವರ್ಷದ ಥೀಮ್ ಆಗಿತ್ತು. ಇಂಪಾದ ಸಂಗೀತದೊಟ್ಟಿಗೆ ಬೆಳಕಿನ ಹಬ್ಬವೇ ಆಗಿ ಕಣ್ಮನ ಸೆಳೆಯಿತು. ಪ್ರತಿ 5 ನಿಮಿಷಗಳಿಗೊಮ್ಮೆ ಬಿತ್ತರವಾಗುತ್ತಿದ್ದ ಈ ಶೋವನ್ನು ವೀಕ್ಷಿಸಲು ಜನ ಸಾಗರವೇ ತುಂಬಿತ್ತು. ಅಲ್ಲೇ ನಿಂತು ಸುಮಾರು ಎರಡು ಮೂರು ಬಾರಿ ಮನಃಪೂರ್ವಕವಾಗಿ ನೋಡಿ ಆನಂದಿಸಿದೆ. ನಂತರ ಎದುರಿಗಿದ್ದ ರಾಕ್‌ಫೆಲ್ಲರ್ ಸೆಂಟರ್ ಕಡೆಗೆ ಹೊರೆಟೆವು. ನ್ಯೂಯಾರ್ಕ್‌ನ ಹೃದಯ ಭಾಗದ ಆಕರ್ಷಣೆಯ ಕೇಂದ್ರಬಿಂದು ರಾಕ್‌ಫೆಲ್ಲರ್ ಸೆಂಟರಿನ ಕ್ರಿಸ್‌ಮಸ್ ಟ್ರೀ. ಎಂದಿನಂತೆ ಈ ಬಾರಿಯೂ ತನ್ನ ಸೌಂದರ್‍ಯದಿಂದ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತಿತ್ತು. ಈ ವೃಕ್ಷವನ್ನು ನೋಡಲೋಸುಗ ದೇಶ ವಿದೇಶಗಳಿಂದ ಜನ ಆಗಮಿಸುವುದು ವಿಶೇಷ! ನವೆಂಬರ್ 29 ರಿಂದ ಜನವರಿ 13, 2024ರವರೆಗೂ ಈ ಮರವನ್ನು ಇಲ್ಲೇ ಇಟ್ಟಿರುತ್ತಾರೆ. ಅಪಾರ ಅರಣ್ಯ ಸಂಪತ್ತು ಇಲ್ಲಿರುವುದರಿಂದ, ಮರವನ್ನು ಕಾಡಿನಿಂದ ತರುತ್ತಾರೆ. ಮರದ ಆಯ್ಕೆ ಪ್ರಕ್ರಿಯೆಯಲ್ಲಿ ಅದರದೇ ಆದ ಒಂದಷ್ಟು ನಿಯಮಾವಳಿಗಳಿವೆ. ಮರದ ದಿಮ್ಮಿ ಇಷ್ಟೇ ಗಾತ್ರದ್ದಿರಬೇಕು, ಅದರ ಸುತ್ತಳತೆ, ಎತ್ತರ ಎಲ್ಲವೂ ಕನಿಷ್ಟ ಪ್ರಮಾಣದಲ್ಲೇ ದೊರಕಬೇಕು. ನಂತರ ಟ್ರಕ್ ಮುಖೇನ ರಾತ್ರಿಯ ಹೊತ್ತಿನಲ್ಲಿ ತರುವುದು ವಾಡಿಕೆ. ಕಾಡಿನಿಂದ ಮರವನ್ನು ನಗರಕ್ಕೆ ತರುವುದೇ ಒಂದು ಸಂಭ್ರಮ. ನಂತರ ಆ ಮರದ ಸುತ್ತಲೂ ತಾತ್ಕಾಲಿಕ ಗೋಡೆಗಳನ್ನು ನಿರ್ಮಿಸಿ, ಸುಮಾರು ಒಂದು ವಾರ ಅಲಂಕಾರ ಮಾಡುತ್ತಾರೆ. ಕೃತಕ ರಾಸಾಯನಿಕ ಸಿಂಪಡಿಸಿ ಮರ, ಎಲೆಗಳು, ಕಾಂಡ ಪ್ರೆಶ್ ಆಗಿರುವಂತೆ ಹಲವಾರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಈ ವರುಷ ಮರವನ್ನು ನ್ಯೂಯಾರ್ಕ್‌ನ ಕಾಡಿನಿಂದಲೇ ತಂದಿದ್ದು, 75 ಅಡಿ ಎತ್ತರವಿದೆ. ಸಮಯ ಮುಗಿದ ನಂತರ ಈ ಮರವನ್ನು ಕಾಡಿನಲ್ಲಿ ಹೋಗಿ ವಿಸರ್ಜಿಸುತ್ತಾರೆ. ಮತ್ತೆ ಮುಂದಿನ ವರ್ಷ ಹೊಸ ಮರದ ಅನ್ವೇಷಣೆ ಪ್ರಾರಂಭವಾಗುತ್ತದೆ. ಇದು ಇಲ್ಲಿಯ ವಿಧಾನ. ಮೊತ್ತ ಮೊದಲಿಗೆ 1931ರ ಡಿಸೆಂಬರ್‌ನಲ್ಲಿ ಈ ಆಚರಣೆ ಆರಂಭವಾಯಿತು. ಅಂದು ರಾಕ್‌ಫೆಲ್ಲರ್ಸ್‌ನ ಕೆಲಸಗಾರರು ಹಣವನ್ನು ಕೂಡಿಸಿ ಮರವನ್ನು ಕೊಂಡು, ತಮ್ಮ ಕುಟುಂಬಸ್ಥರೊಂದಿಗೆ ಸೇರಿ ಸ್ವತಃ ತಯಾರಿಸಿದ ಹೂಮಾಲೆಗಳನ್ನು ಪೋಣಿಸಿ ಅಲಂಕರಿಸಿ, ಸಂಭ್ರಮಿಸಿದರು. ನಂತರದ ವರುಷಗಳಲ್ಲಿ ಈ ಕ್ರಿಸ್‌ಮಸ್ ಮರದ ಆಚರಣೆ ವಾರ್ಷಿಕ ಸಂಪ್ರದಾಯವಾಯಿತು. ಕೆಲವು ವರ್ಷಗಳ ಬಳಿಕ ರಾಕ್‌ಫೆಲ್ಲರ್ ಪ್ಲಾಜಾ ಮುಂದೆ ಐಸ್ ಸ್ಕೇಟಿಂಗ್ ಪ್ಯಾಜೆಂಟ್ ಆರಂಭವಾಯಿತು. ವ್ಯಾಲರಿ ಕ್ಲೇರ್ ಬೌಟ್ ಎಂಬ ಶಿಲ್ಪಿ ಮೆಟಲ್ ವೈರ್‌ಗಳಿಂದ ಏಂಜಲ್‌ನ್ನು ತಯಾರಿಸಿ ಅಲ್ಲಿಟ್ಟು ಸಂಭ್ರಮಿಸಿದ್ದಳಂತೆ. ಇಂದಿಗೂ ಇವುಗಳನ್ನು ಇಲ್ಲಿ ನೋಡಬಹುದು. ಸ್ಟೋನಿ ಪಾಯಿಂಟ್‌ನಿಂದ ಹಡ್ಸನ್ ನದಿಯ ಮೂಲಕ, ಒಹಾಯೋದಿಂದ ಬೃಹದಾಕಾರದ ಮರವನ್ನು ವಿಮಾನದಲ್ಲಿಯೂ ತಂದು ಸಂಭ್ರಮಿಸಿದ ಸಾಕ್ಷ್ಯಗಳಿವೆ. 1999ರಲ್ಲಿ ತಂದ ಮರ ಇತಿಹಾಸ ಸೃಷ್ಟಿಸಿತು. ಕಾರಣ ಇದು 100 ಅಡಿ ಎತ್ತರದ್ದಾಗಿತ್ತು. ಇದನ್ನು ಕನೆಟಿಕೆಟ್‌ನಿಂದ ತರಲಾಗಿತ್ತು ಎಂದು ಹೇಳುತ್ತಾರೆ. ಡಿಸೆಂಬರ್ 2004ರಂದು ಇಲ್ಲಿನ ಪ್ರಸಿದ್ದ ಆಭರಣ ತಯಾರಕರಾದ ಜ್ಯು ಸ್ವರೋಸ್ಕಿಯವರು, 25 ಸಾವಿರ ಕ್ರಿಸ್ಟಲ್ಸ್, 1 ಮಿಲಿಯನ್ ಫೇಸೆಟ್ಸ್ ಹಾಗೂ 9.1 ಅಡಿ ಡಯಾಮೀಟರ್ ಉಳ್ಳ ನಕ್ಷತ್ರವನ್ನು ಮರದ ತುತ್ತ ತುದಿಗೆ ಇಟ್ಟು ಸಂಭ್ರಮಿಸಿದರು. 2018ರಲ್ಲಿ ಡ್ಯಾನಿಯಲ್ ಲಿಬೆಸ್ಕಿಂಡ್ ಎಂಬ ವಿನ್ಯಾಸಕಾರ ಈ ನಕ್ಷತ್ರದ ವಿನ್ಯಾಸವನ್ನು ಬದಲು ಮಾಡಿದ. 9.4 ಫೀಟ್ ಎತ್ತರ, 30 ಲಕ್ಷ ಸ್ವರಾಸ್ಕಿ ಕ್ರಿಸ್ಟಲ್ ನಕ್ಷತ್ರಗಳಿಂದ ಮರವನ್ನು ಅಲಂಕರಿಸಿದ. ಜೊತೆಗೆ ಎಲ್ಇಡಿ ಲೈಟ್‌ಗಳನ್ನೂ ಅಳವಡಿಸಲಾಯಿತು. ಇದೇ ನಕ್ಷತ್ರ ನಮಗಿಂದು ಇಲ್ಲಿ ನೋಡಲು ಸಿಗುವುದು. ಈ ಪ್ಲಾಜಾದ ಮುಂದೆ ಗ್ರೀಕ್ ದೇವರಾದ ಪ್ರೊಮೀಥಿಯಸ್ ಪ್ರತಿಮೆ ಇದೆ. ಇತರೆ ದೇವತೆಗಳು ಮನುಷ್ಯನಿಗೆ ಬೆಂಕಿಯನ್ನು ಕೊಡಬಾರದೆಂದಾಗ, ಈ ದೇವರು ಮನುಷ್ಯರ ಪರ ನಿಂತು, ಬೆಂಕಿಯನ್ನು ಮನುಷ್ಯನಿಗೆ ನೀಡಬೇಕೆಂದು ಹೋರಾಟ ಮಾಡಿ, ಮನುಷ್ಯನಿಗೆ ಬೆಂಕಿ ದಕ್ಕುವಂತೆ ಮಾಡಿತಂತೆ. ಅದರ ಪ್ರತೀಕವಾಗಿ ಈ ಪ್ರತಿಮೆಯನ್ನು ಕಟ್ಟಡದ ಮುಂದೆ ಶಾಶ್ವತವಾಗಿ ಪ್ರತಿಷ್ಠಾಪಿಸಲಾಗಿದೆ. ದೇವರ ಕೈಯಲ್ಲಿ ಬೆಂಕಿಯ ಪಂಜು ಇದೆ. ಒಟ್ಟಿನಲ್ಲಿ ಅಮೆರಿಕದ ಈ ವಿಶ್ವ ಪ್ರಸಿದ್ಧ ಕ್ರಿಸ್‌ಮಸ್ ಟ್ರೀ ಎಲ್ಲರನ್ನೂ ತನ್ನತ್ತ ಸೆಳೆಯುತ್ತ, ಸೌಂದರ್‍ಯ ಸೂಸುತ್ತ ಮೆರೆಯುತ್ತಿದೆ. ಅದನ್ನು ಕಣ್ತುಂಬಿಸಿಕೊಂಡ ಧನ್ಯತೆ ನನಗಿದೆ.