ಕನ್ನಡ ಚಿತ್ರರಂಗಕ್ಕೆ ಭೀಮ ಚಿತ್ರದ ಮೂಲಕ ಹೊಸ ಪ್ರತಿಭಾವಂತ ನಟನ ಆಗಮನವಾಗಿದೆ. ನಾಯಕ, ಖಳನಾಯಕ ಹೀಗೆ ಎಲ್ಲಾ ರೀತಿಯ ಪಾತ್ರಗಳಿಗೆ ಸೂಕ್ತ ಎನಿಸುವ ಇವರ ಹೆಸರು ಜಯಸೂರ್ಯ. ಭೀಮ ಚಿತ್ರದಲ್ಲಿ ಗೆಲವು ಕಂಡಿರುವ ಜಯಸೂರ್ಯ ಅವರ ಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿನಿಮ್ಮ ಹಿನ್ನೆಲೆ ಏನು?

ತಂದೆ ಊರು ಕೆಜಿಎಫ್‌. ತಾಯಿ ಮಡಿಕೇರಿ. ನಾನು ಹುಟ್ಟಿದ್ದು ಮಡಿಕೇರಿಯಲ್ಲಿ. ಈಗ ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಲಾ ಓದುತ್ತಿದ್ದೇನೆ. ನನ್ನ ತಂದೆ ಪೊಲೀಸ್‌ ಅಧಿಕಾರಿ.

ನೀವು ಸಿನಿಮಾಗೆ ಬರುವ ಮುನ್ನ?

ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಸ್ಟರ್‌ ಕರ್ನಾಟಕ ಹಾಗೂ ಮಿಸ್ಟರ್‌ ಇಂಡಿಯಾ ವಿನ್ನರ್‌. ಡ್ಯಾನ್ಸರ್‌ ಕೂಡ. ಮದುವೆ ಹಾಗೂ ಗಣೇಶನ ಹಬ್ಬಗಳಿಗೆ ಕರೆದ ಕೂಡಲೇ ಹೋಗಿ ಡ್ಯಾನ್ಸ್‌ ಮಾಡುತ್ತಿದ್ದೆ.

ಸಿನಿಮಾ ನಟ ಆಗಬೇಕು ಅನಿಸಿದ್ದು?

ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ಡ್ಯಾನ್ಸ್, ಡ್ರಾಮಾ ಮಾಡುತ್ತಿದ್ದೆ. ಇದೇ ನನ್ನ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿತು. ದಾರಿಯಲ್ಲಿ ದುನಿಯಾ ವಿಜಯ್‌ ಪರಿಚಯವಾದರು. ನನ್ನ ಮ್ಯಾನರಿಸಂ, ನನ್ನ ಹೈಟು, ಸ್ಕ್ರೀನ್‌ ಮೇಲೆ ಚೆನ್ನಾಗಿ ಕಾಣುತ್ತೇನೆ ಅಂತ ವಿಜಯ್‌ ಸರ್‌ ‘ಸಲಗ’ ಚಿತ್ರದಲ್ಲಿ ಅವಕಾಶ ಕೊಟ್ಟರು. ಮೊದಲು ನಟಿಸುವುದಕ್ಕೆ ಸಾಧ್ಯನಾ, ಪ್ರೇಕ್ಷಕರು ಗುರುತಿಸುತ್ತಾರೆಯೇ ಎಂಬ ಪ್ರಶ್ನೆ, ಭಯ ಇತ್ತು. ‘ಸಲಗ’ ಮುಗಿದು ‘ಭೀಮ’ ಸಿನಿಮಾ ಮಾಡುವ ಹೊತ್ತಿಗೆ ಭಯ ದೂರವಾಗಿದೆ. ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

‘ಭೀಮ’ ಚಿತ್ರದಿಂದ ನಿಮಗೆ ಸಿಕ್ಕ ಪ್ರಶಂಸೆಗಳೇನು?

ಸೈಕ್‌ ಸೂರ್ಯ ಅಂತಾರೆ. ಪೊಲೀಸ್‌ ಅಧಿಕಾರಿಯಾಗಿ ನನ್ನ ತಂದೆ ಹೇಳುವ ಎಚ್ಚರಿಕೆ ಮಾತುಗಳೇ ‘ಭೀಮ’ ಚಿತ್ರದಲ್ಲೂ ಸಂದೇಶ ರೂಪದಲ್ಲಿ ನೋಡಬಹುದು. ಅಂಥ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿ ಇದೆ.