2007ರಲ್ಲಿ ತೆರೆಕಂಡ ‘ದುನಿಯಾ’ ಸಿನಿಮಾದಲ್ಲಿ ‘ಲೂಸ್ ಮಾದ’ನಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಯೋಗೇಶ್‌ ಮುಂದೆ ಆ ಪಾತ್ರದ ಮೂಲಕವೇ ಗುರುತಿಸಿಕೊಂಡರು. ಇದೀಗ ‘ಲೂಸ್‌ ಮಾದ’ ಹೆಸರಿನ ಸಿನಿಮಾದಲ್ಲಿ ಅವರು ನಾಯಕನಾಗಿದ್ದಾರೆ.

ಸಿನಿವಾರ್ತೆ

2007ರಲ್ಲಿ ತೆರೆಕಂಡ ‘ದುನಿಯಾ’ ಸಿನಿಮಾದಲ್ಲಿ ‘ಲೂಸ್ ಮಾದ’ನಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಯೋಗೇಶ್‌ ಮುಂದೆ ಆ ಪಾತ್ರದ ಮೂಲಕವೇ ಗುರುತಿಸಿಕೊಂಡರು. ಇದೀಗ ‘ಲೂಸ್‌ ಮಾದ’ ಹೆಸರಿನ ಸಿನಿಮಾದಲ್ಲಿ ಅವರು ನಾಯಕನಾಗಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು.

ಈ ವೇಳೆ ಮಾತನಾಡಿದ ಯೋಗೇಶ್‌, ‘ಲೂಸ್ ಮಾದ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. ಆದರೆ ದುನಿಯಾ ಸಿನಿಮಾದ ಲೂಸ್ ಮಾದನ‌ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ’ ಎಂದು ಹೇಳಿದರು.

ನಿರ್ದೇಶಕ ರಂಜಿತ್ ಕುಮಾರ್ ಗೌಡ, ‘ದಿ ವೂಲ್ಫ್‌ ಎಂಬ ಟ್ಯಾಗ್‌ಲೈನ್‌ ಇರುವ ಈ ಚಿತ್ರದಲ್ಲಿ ನಾಯಕ ಯೋಗೇಶ್‌ ತೋಳದ ಸ್ವಭಾವ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನೂ ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆ.25 ರಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದರು.

ಧರ್ಮೇಂದ್ರ ಈ ಸಿನಿಮಾದ ನಿರ್ಮಾಪಕರು. ಆದಿ ಲೋಕೇಶ್ ಮುಖ್ಯಪಾತ್ರದಲ್ಲಿದ್ದಾರೆ.