ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅ‍ವರು ಸ್ಟಾರ್‌ಗಳ ಅಭಿಮಾನಿಗಳು ಎಂದು ಹೇಳಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಸಂದೇಶ ಹಾಕುವವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅ‍ವರು ಸ್ಟಾರ್‌ಗಳ ಅಭಿಮಾನಿಗಳು ಎಂದು ಹೇಳಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಸಂದೇಶ ಹಾಕುವವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ. ಕೆಟ್ಟ ಸಂದೇಶ ಕಳುಹಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಅಶ್ಲೀಲ ಸಂದೇಶಗಳನ್ನು ಕಳುಹಿಸುವವರಿಗೆ ಕಾನೂನಾತ್ಮಕವಾಗಿ ಬುದ್ಧಿ ಕಲಿಸುತ್ತೇವೆ’ ಎಂದಿದ್ದಾರೆ.

‘ನಿಜವಾದ ಫ್ಯಾನ್ಸ್ ಈ ರೀತಿ ಮಾಡುತ್ತಿದ್ದಾರೆಯೇ? ಅಥವಾ ನಾಯಕ ನಟರ ಹೆಸರು ಬಳಸಿಕೊಂಡು ದುರುಳರು ಈ ರೀತಿ ಮಾಡುತ್ತಿದ್ದಾರೆಯೇ ಎಂಬುದು ಪತ್ತೆ ಹಚ್ಚಬೇಕಿದೆ’ ಎಂದೂ ಹೇಳಿದ್ದಾರೆ.

‘ಅಭಿಮಾನಿಗಳ ಜಗಳ ನೋಡಿದರೆ ಸಿನಿಮಾ ಮಾಡಲು ಭಯ ಆಗುತ್ತದೆ. ದೊಡ್ಡ ದಿಗ್ಗಜರು ಕಟ್ಟಿದ ಚಿತ್ರರಂಗ ಇದು. ಇಲ್ಲಿ ಎಲ್ಲರಿಗೂ ಅಭಿಮಾನಿಗಳು ಇರುತ್ತಾರೆ. ಮೊದಲೆಲ್ಲ ಒಳ್ಳೆಯ ಚಿತ್ರಗಳು ಬಂದರೆ ನೋಡುತ್ತಿದ್ದರು. ಈಗ ಇಂಡಿಯಾ-ಪಾಕಿಸ್ತಾನ ರೀತಿ ಆಗಿದೆ. ಸೋಷಿಯಲ್‌ ಮೀಡಿಯಾಗಳನ್ನು ಜಗಳಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಲಾವಿದರ ಸಂಘದ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ರಾಕ್‌ಲೈನ್‌ ವೆಂಕಟೇಶ್‌ ಹೇಳಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಲು ಕಲಾವಿದರ

ಸಂಘಕ್ಕೆ ಭಾಮಾ ಹರೀಶ್ ದೂರು

ಸ್ಟಾರ್‌ ಅಭಿಮಾನಿಗಳು ಅಂತ ಹೇಳಿಕೊಳ್ಳುವವರು ಸೋಷಿಯಲ್‌ ಮೀಡಿಯಾಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಾರೆ, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್‌ ವೆಂಕಟೇಶ್‌ ದೂರು ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.