ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲೋನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನ ಮಂಜೂರಾಗಿರುವ ಬಗ್ಗೆ ದಾಖಲೆಗಳು ಇಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಪರಿಹಾರ ಕಲ್ಪಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ
ಬೆಂಗಳೂರು : ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲೋನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನ ಮಂಜೂರಾಗಿರುವ ಬಗ್ಗೆ ದಾಖಲೆಗಳು ಇಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಕೋಗಿಲು ಬಡಾವಣೆಯಲ್ಲಿನ ಮನೆಗಳನ್ನು ಅಕ್ರಮವಾಗಿ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಕಲ್ಪಿಸಲು ಕೋರಿ ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
167 ಮಂದಿ ಸಂತ್ರಸ್ತರು:
ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೋಕೇಟ್ ಜನರಲ್, ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲೋನಿಗಳಲ್ಲಿ ಯಾವುದೇ ವ್ಯಕ್ತಿಯ ನಿವೇಶನಕ್ಕೆ ಸಂಬಂಧಿಸಿ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ. ಕೋಗಿಲು ಬಡಾವಣೆ ಹೊರಗೆ ಮೂವರಿಗೆ ತಾತ್ಕಾಲಿಕ ನಿವೇಶನದ ಹಕ್ಕು ಪತ್ರ ನೀಡಿರುವ ಮಾಹಿತಿ ಇದೆ. ಅದು ಷರತ್ತಿಗೆ ಒಳಪಟ್ಟಿದೆ. ಇನ್ನೂ ನಾಲ್ಕು ಮಂದಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನೂ ತೆರವು ಕಾರ್ಯಾಚರಣೆಯಲ್ಲಿ 167 ಮಂದಿ ಸಂತ್ರಸ್ತರಾಗಿದ್ದಾರೆ. ನಾಲ್ಕು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರ ವಾದ ಏನು ?
ಅರ್ಜಿದಾರರ ಪರ ವಕೀಲರು, ನಾಲ್ಕು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸಂಪರ್ಕ ಸಂಖ್ಯೆಯೂ ಸರಿಯಾಗಿಲ್ಲ. ಬಿಬಿಎಂಪಿಗೆ ತೆರವು ಕಾರ್ಯಾಚರಣೆ ನಡೆಸುವ ಅಧಿಕಾರವಿಲ್ಲ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ವಕೀಲೆ ಬಿ.ವಿ.ವಿದ್ಯುಲ್ಲತಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು. ಹಾಗೆಯೇ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿ ವರದಿ ನೀಡಬೇಕು ಹಾಗೂ ಅಮಿಕಸ್ ಕ್ಯೂರಿಗೆ ನೆರವಾಗಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

