ಕೊರಗಜ್ಜ ಚಿತ್ರ ಕೊರಗ ಸಮುದಾಯದ ಬಯೋಪಿಕ್ : ಸುಧೀರ್‌ ಅತ್ತಾವರ್‌

| N/A | Published : Nov 13 2025, 01:05 PM IST

koragajja
ಕೊರಗಜ್ಜ ಚಿತ್ರ ಕೊರಗ ಸಮುದಾಯದ ಬಯೋಪಿಕ್ : ಸುಧೀರ್‌ ಅತ್ತಾವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುಧೀರ್‌ ಅತ್ತಾವರ್‌ ನಿರ್ದೇಶನದ ‘ಕೊರಗಜ್ಜ’ ಚಿತ್ರದ ಆಡಿಯೋ ಬಿಡುಗಡೆ ಜೊತೆಗೆ ಅದ್ದೂರಿಯಾಗಿ ಕೊರಗಜ್ಜನ ಕೋಲ ಸೇವೆಯೂ ನಡೆಯಿತು. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಆಡಿಯೋ ಬಿಡುಗಡೆ ನಂತರ ಇಲ್ಲಿನ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು

 ಸಿನಿವಾರ್ತೆ

ಸುಧೀರ್‌ ಅತ್ತಾವರ್‌ ನಿರ್ದೇಶನದ ‘ಕೊರಗಜ್ಜ’ ಚಿತ್ರದ ಆಡಿಯೋ ಬಿಡುಗಡೆ ಜೊತೆಗೆ ಅದ್ದೂರಿಯಾಗಿ ಕೊರಗಜ್ಜನ ಕೋಲ ಸೇವೆಯೂ ನಡೆಯಿತು. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಆಡಿಯೋ ಬಿಡುಗಡೆ ನಂತರ ಇಲ್ಲಿನ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು. ಆರು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ 31 ಹಾಡುಗಳಿವೆ. ಗೋಪಿ ಸುಂದರ್‌ ಸಂಗೀತ ಇದೆ. ಹಾಡುಗಳನ್ನು ಜೀ ಮ್ಯೂಸಿಕ್‌ ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ. ಆ ಮೂಲಕ ಕನ್ನಡ ಚಿತ್ರವೊಂದರ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್‌ ಸಂಸ್ಥೆಯ ಮೊದಲ ಬಾರಿಗೆ ತನ್ನದಾಗಿಸಿಕೊಂಡಿದೆ.

ಚಿತ್ರತಂಡಕ್ಕೆ ಶುಭ ಕೋರಿದ ಜೈ ಜಗದೀಶ್‌, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌

ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ನಟಿಯರಾದ ಶ್ರುತಿ, ಭವ್ಯ, ಬಾಲಿವುಡ್‌ ನಟ ಸಂದೀಪ್‌ ಸೋಪರ್ಕರ್‌, ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿದ್ಯಾದರ್‌ ಶೆಟ್ಟಿ ಹಾಜರಿದ್ದರು. ತುಂಬಾ ಹಿಂದೆಯೇ ‘ಕೊರಗಜ್ಜ’ನ ಕುರಿತು ಚಿತ್ರ ಮಾಡಲು ಹೊರಟಿದ್ದ ಹಿರಿಯ ನಟ ಜೈ ಜಗದೀಶ್‌, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

ವಿಜಯಲಕ್ಷ್ಮೀ ಸಿಂಗ್‌, ‘2019ರಿಂದ 2020ರ ವರೆಗೂ ನಾವು ಕೊರಗಜ್ಜ ಸಿನಿಮಾ ಮಾಡಲು ಪ್ರಯತ್ನ ಮಾಡಿದ್ವಿ. ಆ ನಂತರ ನಾವು ದೈವದ ಬಳಿ ಕೇಳಿದಾಗ ನಿಮಗೆ ಆಗಿ ಬರಲ್ಲ ಎಂದು ಹೇಳಿದರು. ಹೀಗಾಗಿ ಕೊರಗಜ್ಜ ಸಿನಿಮಾ ಮಾಡುವುದರಿಂದ ಹಿಂದೆ ಸರಿದ್ವಿ. ಸುಧೀರ್‌ ಅತ್ತಾವರ್‌ ಇದೇ ಸಿನಿಮಾ ಮಾಡಲು ಹೊರಟಾಗ ನಮಗೆ ಖುಷಿ ಆಯಿತು. ಅಲ್ಲದೆ ನಮ್ಮ ಬಳಿ ಇದ್ದ ‘ಕೊರಗಜ್ಜ’ ಶೀರ್ಷಿಕೆಯನ್ನು ನಾವೇ ಕೊಟ್ಟಿದ್ದೇವೆ. ಈ ಚಿತ್ರ ಶುರುವಾದಾಗ ‘ಕಾಂತಾರ’ ಕೂಡ ಬಿಡುಗಡೆ ಆಗಿರಲಿಲ್ಲ’ ಎಂದರು.

ಸಾಕಷ್ಟು ಸವಾಲುಗಳನ್ನು ಎದುರಿಸಿಕೊಂಡೇ ಈ ಚಿತ್ರ

ಸುಧೀರ್‌ ಅತ್ತಾವರ್‌, ‘ಸಾಕಷ್ಟು ಸವಾಲುಗಳನ್ನು ಎದುರಿಸಿಕೊಂಡೇ ಈ ಚಿತ್ರ ಮಾಡಿದ್ದೇನೆ. ಕೊರಗಜ್ಜ ಸಿನಿಮಾ ಎಂಬುದು ಕೊರಗ ಸಮುದಾಯದ ಬಯೋಪಿಕ್‌ ಎನ್ನಬಹುದು. ಈ ಚಿತ್ರದ ಮೂಲಕ ನಮ್ಮ ನೆಲದ ಸಂಸ್ಕೃತಿ, ಆಚಾರ-ವಿಚಾರ, ಜಾತಿಯ ತಾರತಮ್ಯ ಮುಂತಾದವುಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. 24 ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾಗುವ ಕತೆ ಇಲ್ಲಿದೆ’ ಎಂದರು.

ಶ್ರುತಿ, ‘ನಂಗೆ ಈ ಚಿತ್ರವು ವಿಶೇಷವಾದ ಅನುಭವ ನೀಡಿದೆ. ನಮ್ಮ ನಾಡಿನ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವ ಪ್ರಯತ್ನ ಈ ಚಿತ್ರದಿಂದ ಆಗುತ್ತಿದೆ. ಕೊರಗಜ್ಜ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಆದರೂ ಕನ್ನಡದಲ್ಲಿ ನೋಡಿದರೆ ಚೆನ್ನಾಗಿ ಅರ್ಥ ಆಗುತ್ತದೆ’ ಎಂದರು. ನಟಿ ಭವ್ಯ, ‘ನಮ್ಮ ಕಲೆ ಸಂಸ್ಕೃತಿ ನಶಿಸಿ ಹೋಗುವ ಕಾಲದಲ್ಲಿ ಇಂತಹ ಚಿತ್ರ ಬರುತ್ತಿರುವುದು ಖುಷಿ ಕೊಟ್ಟಿದೆ’ ಎಂದರು.

Read more Articles on