ಸಾರಾಂಶ
ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದವರಿಗೆ ಕೃಷಿಯೋಗ್ಯ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರೊಂದಿಗೆಬೆಂಗಳೂರಿನ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಶುಕ್ರವಾರ ಕೊರಗ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದವರಿಗೆ ಕೃಷಿಯೋಗ್ಯ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರೊಂದಿಗೆಬೆಂಗಳೂರಿನ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಶುಕ್ರವಾರ ಕೊರಗ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.ಜಾಗೃತ ಕರ್ನಾಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಪ್ರತಿನಿಧಿಗಳು ಮತ್ತು ತುಮಕೂರಿನ ಅಲೆಮಾರಿ ಸಮುದಾಯದ ಪ್ರತಿನಿಧಿಗಳ ನಿಯೋಗದೊಂದಿಗೆ ಸಚಿವ ಕೃಷ್ಣಬೈರೇ ಗೌಡರೊಂದಿಗೆ ಸಭೆ ಏರ್ಪಟ್ಟಿತು.ಕೊರಗ ಸಮುದಾಯದವರಿಗೆ ನೀಡಲೆಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಿರುವ ಕೃಷಿ ಯೋಗ್ಯ ಭೂಮಿಯನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಕೊರಗ ಸಂಘದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇ ಗೌಡ ಅವರ ಮುಂದೆ ತಮ್ಮ ಅಹವಾಲು ಸಲ್ಲಿಸಿದರು.ಸಮುದಾಯದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇ ಗೌಡ, ಈ ಹಿಂದೆ ಕೊರಗ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರು ಮಾಡಿದ ಪ್ರಕ್ರಿಯೆಗಳನ್ನು ಜಿಲ್ಲಾಡಳಿತದೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಲೋಚನೆ ನಡೆಸಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೊರಗ ಸಮುದಾಯದ ಹಿನ್ನೆಲೆ ಹಾಗೂ ಪ್ರಸ್ತುತ ಕೊರಗ ಸಮುದಾಯದ ಸ್ಥಿತಿಗತಿಯ ಬಗ್ಗೆ ಸಭೆಗೆ ವಿವರ ನೀಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಎಚ್, ದ.ಕ. ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ, ಉಪಾಧ್ಯಕ್ಷ ಕೊಗ್ಗ ರಮೇಶ್, ಪ್ರಧಾನ ಕಾರ್ಯದರ್ಶಿ ಶಶಿಕಲಾ, ಪದಾಧಿಕಾರಿಗಳಾದ ಸಂಜೀವ ಕೊಡಿಕಲ್, ಕಮಲ ಮೊಂಟೆಪದವು, ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯರಾದ ಬಿ.ಸಿ ಬಸವರಾಜ್, ಲಕ್ಷ್ಮಣ್ ಕುಂದರ್, ಡಾ.ವಾಸು ಎಚ್.ವಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತಿತರರಿದ್ದರು.