ಫಿಲಾಸಫಿ ಇರುವ ಪ್ರೇಮಕತೆ ಲವ್‌ ಓಟಿಪಿ : ಸ್ವರೂಪಿಣಿ

| N/A | Published : Nov 14 2025, 01:54 PM IST

Love OTP

ಸಾರಾಂಶ

 

ಅನೀಶ್‌ ತೇಜೆಶ್ವರ್‌ ನಟನೆ, ನಿರ್ದೇಶನದ, ವಿಜಯ್‌ ರೆಡ್ಡಿ ನಿರ್ಮಾಣದ ‘ಲವ್‌ ಓಟಿಪಿ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬಂದಿರುವ ಈ ಚಿತ್ರದ ಕುರಿತು ನಾಯಕಿ ಸ್ವರೂಪಿಣಿ ಮಾತುಗಳು ಇಲ್ಲಿವೆ.

ಆರ್‌.ಕೇಶವಮೂರ್ತಿ

ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಹೇಗಿದೆ ರೆಸ್ಪಾನ್ಸ್‌?

ತುಂಬಾ ಚೆನ್ನಾಗಿದೆ. ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಸಿನಿಮಾ ನೋಡಿದವರು ವಿಷಲ್‌ ಹೊಡೆದು ಕ್ಲಾಪ್ಸ್‌ ಹಾಕುತ್ತಿದ್ದಾರೆ. ಒಂದು ಒಳ್ಳೆಯ ಚಿತ್ರದಲ್ಲಿ ನಟಿಸಿದ್ದೇನೆಂಬ ಖುಷಿ ಪಡುವಷ್ಟು ಪ್ರೇಕ್ಷಕರು ‘ಲವ್‌ ಓಟಿಪಿ’ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲೂ ಇದೇ ರೀತಿ ರೆಸ್ಪಾನ್ಸ್‌ ಬರುತ್ತಿದೆ. ನೀವು ತೆಲುಗಿನಲ್ಲಿ ಯಾಕೆ ನಟಿಸುತ್ತಿಲ್ಲ ಎನ್ನುತ್ತಿದ್ದಾರೆ. ಥಿಯೇಟರ್‌ನಲ್ಲಿ ನನ್ನ ಪಾತ್ರದ ಹೆಸರು ಕೂಗುತ್ತಿದ್ದಾರೆ.

ಚಿತ್ರದಲ್ಲಿ ನಿಮ್ಮ ಪಾತ್ರ ನೋಡಿ ಹೇಳುತ್ತಿರುವ ಬೆಸ್ಟ್‌ ಕಾಂಪ್ಲಿಮೆಂಟ್ಸ್‌ ಏನು?

ದೃಶ್ಯ ಸಿನಿಮಾ ಆದ ಮೇಲೆ ನೀವು ಎಲ್ಲಿ ಹೋದ್ರಿ, ಇಷ್ಟು ಚೆನ್ನಾಗಿ ಅಭಿನಯಿಸುವ ನೀವು ಯಾಕೆ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ ಅಂತ ಕೇಳುತ್ತಿದ್ದಾರೆ. ಅಂದರೆ ನನ್ನ ಪಾತ್ರ ಪ್ರೇಕ್ಷಕರಿಂದ ಮರೆಯಾಗಿಲ್ಲ.

ಯಾಕೆ ಹೆಚ್ಚು ಚಿತ್ರಗಳಲ್ಲಿ ನಟಿಸಿಲ್ಲ ನೀವು?

ದೃಶ್ಯ 2 ನನ್ನ ಕೊನೆಯ ಸಿನಿಮಾ. ಕೊರೋನಾ ಸಮಯದಲ್ಲಿ ಬಿಡುಗಡೆ ಆದ ಚಿತ್ರವಿದು. ಆರೋಗ್ಯ ಸಮಸ್ಯೆಯಿಂದ ಒಂದು ವರ್ಷ ಯಾವುದೇ ಸಿನಿಮಾ ಒಪ್ಪಿಲ್ಲ. ನಾನೇ ಗ್ಯಾಪ್‌ ತೆಗೆದುಕೊಂಡೆ. ಆ ನಂತರ ಕತೆಗಳನ್ನು ಕೇಳಕ್ಕೆ ಶುರು ಮಾಡಿದ ಮೇಲೆ ಸಿಕ್ಕ ಒಳ್ಳೆಯ ಅವಕಾಶ ‘ಲವ್‌ ಓಟಿಪಿ’ ಸಿನಿಮಾ.

ಲವ್‌ ಓಟಿಪಿ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ನಾನು ಇಲ್ಲಿ ಎರಡು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಟೀನೇಜ್‌ ಹಾಗೂ ಮೆಚ್ಯೂರ್ಡ್‌ ಪಾತ್ರ. ಎರಡೂ ರೀತಿಯ ಪ್ರತಿಭೆಯನ್ನು ತೋರಿಸುವುದಕ್ಕೆ ಅವಕಾಶ ಸಿಕ್ಕಿತು. ನನ್ನ ಪಾತ್ರದ ಹೆಸರು ಸನಾ ಅಂತ.

ಈ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ನಗಿಸುತ್ತಲೇ ಒಂದು ಫಿಲಾಸಫಿ ಮೂಲಕ ಪ್ರೇಮ ಕತೆಯನ್ನು ಹೇಳಿದ್ದೇವೆ. ಹೇಗೆ ‘ಸು ಫ್ರಂ ಸೋ’ ಚಿತ್ರ ಹಾಸ್ಯದ ಮೂಲಕ ಸಂದೇಶ ಹೇಳಿತ್ತೋ ಅದೇ ರೀತಿ ‘ಲವ್‌ ಓಟಿಪಿ’. ಈಗಿನ ಜನರೇಷನ್‌ಗೆ ಇದು ತುಂಬಾ ಕನೆಕ್ಟ್‌ ಆಗುತ್ತದೆ. ಹಳೆಯ ಕಾಲದವರು ನೋಡಿದಾಗ ನಮ್ಮ ಲೈಫಿನಲ್ಲೂ ಇಂಥ ಪಾತ್ರ ಇತ್ತು ಎನಿಸುತ್ತದೆ.

ನಿಮಗೆ ಈ ಸಿನಿಮಾ ಯಾಕೆ ಮುಖ್ಯ?

ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ. ಜೊತೆಗೆ ತುಂಬಾ ದಿನಗಳ ನಂತರ ಒಂದು ಅಪ್‌ಡೇಟೆಡ್ ಪ್ರೇಮ ಕತೆಯನ್ನು ಹೊತ್ತು ಬಂದಿರುವುದು, ಜೊತೆಗೆ ಈ ಚಿತ್ರದ ಮೂಲಕ ನಾನು ತೆಲುಗಿಗೂ ಹೋಗಿರುವುದು.

ನಟ, ನಿರ್ದೇಶಕ ಅನೀಶ್‌ ತೇಜೆಶ್ವರ್‌ ಜೊತೆಗಿನ ಕೆಲಸ ಹೇಗಿತ್ತು?

ಅನೀಶ್‌ ಅವರು ಜಸ್ಟ್‌ ನನಗೆ ಹಾಯ್‌, ಬಾಯ್‌... ಸ್ನೇಹಿತ. ನಿಮ್ಮ ಜೊತೆಗೆ ಕೆಲಸ ಮಾಡಬೇಕು ಎಂದು ನಾನೇ ಅವರ ಬಳಿ ಒಮ್ಮೆ ಹೇಳಿಕೊಂಡಿದ್ದೇ. ಅದನ್ನು ನೆನಪಿಟ್ಟುಕೊಂಡು ಕರೆದು ಅವಕಾಶ ಕೊಟ್ಟರು. ಅವರು ಹೀರೋ ಆಗಿದ್ದರೂ ಕೂಡ ಫೀಮೇಲ್‌ ಪಾತ್ರಗಳಿಗೆ ಹೆಚ್ಚು ಸ್ಪೇಸ್‌ ಕೊಟ್ಟಿದ್ದಾರೆ. ಈಗ ಅತ್ಯುತ್ತಮ ಸ್ನೇಹಿತನ ಜೊತೆಗೆ ಕೆಲಸ ಮಾಡಿದಷ್ಟು ಖುಷಿ ಆಗುತ್ತಿದೆ.

ಕತೆ, ಚಿತ್ರಕಥೆ ಮೆಚ್ಚಿಕೊಳ್ಳುತ್ತಿದ್ದಾರೆ: ಅನೀಶ್‌ ತೇಜೇಶ್ವರ್‌

ತಂದೆ ಮತ್ತು ಮಗನ‌ ಸಂಬಂಧ, ಪ್ರೀತಿ, ಪ್ರೇಮ ಸೇರಿದಂತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಮಾಡಿರುವ ಸಿನಿಮಾ. ಚಿತ್ರದ ನೋಡಿದವರು ಕತೆ, ಚಿತ್ರಕಥೆಯನ್ನು ಮೆಚ್ಚುಕೊಳ್ಳುತ್ತಿದ್ದಾರೆ. ಪ್ರೇಮ ಕತೆಯನ್ನು ಹೊಸ ರೀತಿಯಲ್ಲಿ ಹೇಳಿದ್ದೀರಿ ಎನ್ನುತ್ತಿದ್ದಾರೆ. ನಿರ್ದೇಶಕ, ನಟನಾಗಿ ನಾನು ಮೊದಲ ಬಾರಿಗೆ ತೆಲುಗಿಗೂ ಹೋಗಿದ್ದೇನೆ. ಇದು ನನ್ನ ಸಿನಿಮಾ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

Read more Articles on