ಸಾರಾಂಶ
ಗತವೈಭವ ನಾಯಕಿಯ ಸಂದರ್ಶನ
ಸಿಂಪಲ್ ಸುನಿ ನಿರ್ದೇಶನ, ನಿರ್ಮಾಣದ ದುಷ್ಯಂತ್, ಆಶಿಕಾ ರಂಗನಾಥ್ ನಟನೆಯ ‘ಗತವೈಭವ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ನಾಯಕಿ ಆಶಿಕಾ ಮಾತನಾಡಿದ್ದಾರೆ.
- ಪ್ರಿಯಾ ಕೆರ್ವಾಶೆ
ತೆಲುಗು, ತಮಿಳು ಇಂಡಸ್ಟ್ರಿಯಲ್ಲೆಲ್ಲ ನಟಿಸಿ ಮತ್ತೆ ಕನ್ನಡಕ್ಕೆ ಬಂದಿದ್ದೀರಿ, ಹೇಗಿದೆ ಫೀಲ್?
ಮತ್ತೆ ಮನೆಗೆ ಹಾಗೆ ಹಿತವಾಗಿದೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸಿ ಒಂದೂವರೆ ವರ್ಷ ಮೇಲಾಯ್ತು. ಓ2 ಸಿನಿಮಾವೇ ಕೊನೆ. ನನ್ನ ಮಾತೃಭಾಷೆ ಸಿನಿಮಾದಲ್ಲಿ ನಟಿಸುವ ಖುಷಿಯ ಜೊತೆಗೆ ‘ಗತವೈಭವ’ ಸಿನಿಮಾ ಕೊಟ್ಟ ಅನುಭವವೂ ದೊಡ್ಡದು.
ಈ ಸಿನಿಮಾದಲ್ಲಿ ಮೂರ್ನಾಲ್ಕು ಥರ ಕನ್ನಡ ಮಾತಾಡ್ತೀರಲ್ಲಾ..
ಹೌದು. ಬೆಂಗಳೂರು ಕನ್ನಡ, ಪೌರಾಣಿಕ ಕನ್ನಡ ಭಾಷೆ, ಮಂಗಳೂರು ಕನ್ನಡ ಹೀಗೆ. ಜೊತೆಗೆ ಪೋರ್ಚುಗಲ್ ಭಾಗದ ಕಥೆಯೂ ಬರುತ್ತದೆ. ಅಲ್ಲಿನ ನನ್ನ ಭಾಷೆ ಬಗ್ಗೆ ಸಿನಿಮಾದಲ್ಲೇ ನೋಡಬೇಕು. ಮಂಗಳೂರು ಭಾಷೆ ನಾನು ಫಾಸ್ಟ್ ಆಗಿ ಕಲಿತದ್ದು ನೋಡಿ ನಮ್ ನಿರ್ದೇಶಕರೇ ಶಹಭಾಸ್ ಅಂದರು. ನನಗೆ ಕಾಲೇಜ್‌ನಲ್ಲಿ ಒಂದಿಷ್ಟು ಮಂದಿ ಮಂಗಳೂರು ಕಡೆಯ ಶೆಟ್ಟಿ ಗ್ಯಾಂಗ್ ಫ್ರೆಂಡ್ಸ್ ಇದ್ದರು. ಅವರ ಮಾತನ್ನು ಮಿಮಿಕ್ ಮಾಡುತ್ತಿದ್ದೆ. ಆದರೆ ಅದು ಈ ರೀತಿ ಪ್ರಯೋಜನಕ್ಕೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ.
ಯಾವ್ಯಾವುದೋ ಕಾಲಕ್ಕೆ ಸಿನಿಮಾ ಹೋಗುತ್ತಲ್ಲಾ, ನಿಮ್ಮ ಪಾತ್ರಗಳೇನು?
ಮೊದಲ ಭಾಗದಲ್ಲಿ ನನ್ನ ಹೆಸರು ಆಧುನಿಕಾ, ಹೀರೋ ಹೆಸರು ಪುರಾತನ. ಈ ಪಾತ್ರಗಳ ಹೆಸರು ಹೇಗೆ ವಿಶಿಷ್ಟವೋ ಅವುಗಳ ಮೈಂಡ್‌ಸೆಟ್ ಕೂಡ ಅಷ್ಟೇ ವಿಭಿನ್ನ. ಆ ಬಳಿಕ ದೇವಕನ್ಯೆ ಪಾತ್ರ. ನಂತರದ್ದು ಪೋರ್ಚುಗಲ್ ಹುಡುಗಿ, ಆಮೇಲೆ ಮಂಗಳೂರಿನ ಮಂಗಳಾ ಅನ್ನುವ ಪಾತ್ರ. ಅದರಲ್ಲಿ ಮಂಗಳಾ ಪಾತ್ರದಲ್ಲಿ ನನ್ನ ನಟನೆ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಪೌರಾಣಿಕ ಪಾತ್ರದಲ್ಲಿ ನಟಿಸಬೇಕೆನ್ನುವ ಆಸೆ ದೇವಕನ್ಯೆ ಪಾತ್ರದ ಮೂಲಕ ನೀಗಿದೆ.
ಪೋರ್ಚುಗಲ್‌ನಲ್ಲಿ ಸಮುದ್ರ ನೀರು ಸಮುದ್ರಕ್ಕೆ ಚೆಲ್ಲಿದ ಎಕ್ಸ್‌ಪೀರಿಯನ್ಸ್, ಭಾಷೆ ಕಲಿತಿರಾ?
ಪೋರ್ಚುಗಲ್‌ನ ಮದೈರಾ ಅನ್ನುವ ದ್ವೀಪ. ಅಲ್ಲಿ ಸಮುದ್ರದ ಮಧ್ಯೆ 500 ವರ್ಷ ಹಳೆಯ ಹಡಗಿನಲ್ಲಿ ನಮ್ಮ ಶೂಟಿಂಗ್. ಆ ಕಾಲದ ಉಡುಗೆ, ಬದುಕಿನ ರೆಪ್ಲಿಕಾ. ವಾಸ್ಕೋಡಗಾಮ ಭಾರತಕ್ಕೆ ಸಮುದ್ರಮಾರ್ಗ ಪತ್ತೆ ಮಾಡಿದ ಸಂದರ್ಭದ ಕಥೆ. ಮೂಳೆ ಕೊರೆಯುವ ಚಳಿ, ಜೊತೆಗೆ ಸಮುದ್ರದಿಂದ ಬೀಸುವ ಗಾಳಿ, ಅಲೆಗಳ ಅಬ್ಬರ.. ಅಲ್ಲಿ ಒಂದು ಗಂಟೆ ಕಳೆಯುವುದೇ ಕಷ್ಟ. ನಾವು ಇಡೀ ದಿನ ಶೂಟ್ ಮಾಡಬೇಕಿತ್ತು. ನಟನೆಯ ಜೊತೆಗೆ ಅಸಿಸ್ಟೆಂಟ್ ಕೆಲಸವನ್ನೂ ಮಾಡಬೇಕಿತ್ತು. ಒಂದೊಳ್ಳೆ ಅನುಭವ.
ನೀವು ಬಹುಭಾಷಾ ತಾರೆ, ಈ ಸಿನಿಮಾದಲ್ಲಿ ಏನು ಹೆಚ್ಚುಗಾರಿಕೆ ಕಂಡ್ರಿ?
ಸುನಿ ಸರ್ ಕಥೆ ಹೇಳುವ ಶೈಲಿ, ಒಂದೇ ಸಿನಿಮಾದಲ್ಲಿ ಹಲವು ಕಾಲಘಟ್ಟ, ಆ ಬದುಕು, ನಟನೆ, ಸಿನಿಮಾಟೋಗ್ರಫಿ ಹೀಗೆ ಸಿನಿಮಾ ಬಹಳ ಮಜವಾಗಿದೆ. ಥೇಟರಲ್ಲಿ ನೋಡಿದ್ರೆ ಬೇರೆ ಜಗತ್ತಿಗೆ ಹೋದ ಅನುಭವ ಪಡೆಯುತ್ತೀರಿ.
ನೀವು ಬೇರೆ ಭಾಷೆಗಳಲ್ಲಿ ನಟಿಸಿದ್ದೀರಿ, ಪಾತ್ರಗಳು ಯಾವ ಥರ ಬರುತ್ತವೆ, ನೀವು ಯಾವ ಬಗೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?
ನನಗೆ ಪೌರಾಣಿಕ ಪಾತ್ರ ಮಾಡುವ ಆಸೆ ಇತ್ತು. ಈ ಸಿನಿಮಾದಲ್ಲಿ ಈಡೇರಿದೆ. ಈವರೆಗೆ ಸಿಕ್ಕ ಪಾತ್ರಗಳೆಲ್ಲ ವೈವಿಧ್ಯಮಯವಾಗಿದ್ದವು. ಕುತೂಹಲ ಮೂಡಿಸುವ, ಹೊಸ ಕಥನಗಾರಿಕೆಯ, ಒಂದೊಳ್ಳೆ ಟೀಮ್ ಇರುವ ಸ್ಕ್ಟಿಪ್ಟ್ ಸಿಕ್ಕರೆ ನಟಿಸಲು ಸದಾ ಸಿದ್ಧ.
ಚಿರಂಜೀವಿ, ಸುದೀಪ್ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿದ್ದೀರಿ, ಹೊಸಬರೊಂದಿಗೂ ಅಭಿನಯಿಸಿದ್ದೀರಿ, ಏನು ವ್ಯತ್ಯಾಸ ಕಂಡಿರಿ?
ಹೊಸಬರ ಸಿನಿಮಾ ಅಂದರೆ ತಾಜಾತನ ಇರುತ್ತದೆ. ಡೇಟ್ಸ್‌ನಲ್ಲಿ ಹೊಂದಾಣಿಕೆ ಮಾಡಬೇಕಾಗಿರಲ್ಲ. ಸ್ಟಾರ್ ನಟರೆಂದರೆ ನಮ್ಮ ಡೇಟ್ಸ್ ಅನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ ಸ್ಟಾರ್ ಸಿನಿಮಾಗಳಲ್ಲಿ ಹೊಣೆಗಾರಿಕೆ ಹೆಚ್ಚಿರಲ್ಲ. ಹೊಸಬರ ಚಿತ್ರವಾದರೆ ನಾವೇ ಫೇಸ್ ಆಗಿರುವ ಕಾರಣ ಪ್ರತಿಯೊಂದನ್ನೂ ನೋಡಬೇಕಾಗುತ್ತದೆ, ಜವಾಬ್ದಾರಿ ಹೆಚ್ಚಿರುತ್ತದೆ.
;Resize=(690,390))
)
)


;Resize=(128,128))
;Resize=(128,128))
;Resize=(128,128))