ಪವನ್ ಕುಮಾರ್ ನಿರ್ದೇಶನದ ‍‘ಲೂಸಿಯಾ’ ಚಿತ್ರ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಬಹುಭಾಷೆಯ ಸಿನಿಮಾ ಪ್ರೇಮಿಗಳನ್ನು ಸೆಳೆದಿತ್ತು. ಇದೀಗ ಆ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳ ಬಳಿಕ ಪವನ್ ‘ಲೂಸಿಯಾ 2’ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.

ಸಿನಿವಾರ್ತೆ

ಪವನ್ ಕುಮಾರ್ ನಿರ್ದೇಶನದ ‍‘ಲೂಸಿಯಾ’ ಚಿತ್ರ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಬಹುಭಾಷೆಯ ಸಿನಿಮಾ ಪ್ರೇಮಿಗಳನ್ನು ಸೆಳೆದಿತ್ತು. ಇದೀಗ ಆ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳ ಬಳಿಕ ಪವನ್ ‘ಲೂಸಿಯಾ 2’ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಕ್ರೌಡ್ ಫಂಡಿಂಗ್ ಮಾಡಲು ಸಿದ್ಧರಾಗಿರುವ ಪವನ್, ಲೂಸಿಯಾ 2 ಸಿನಿಮಾ ಮಾಡಲು ಆಸಕ್ತಿ ಇರುವವರು ಜೊತೆಯಾಗಿ ಎಂದು ಕೇಳಿಕೊಂಡು ಲೂಸಿಯಾ ವನ್ಸ್ ಮೋರ್ ಹೆಸರಿನಲ್ಲಿ ಕ್ಯೂಆರ್ ಕೋಡ್ ಕೊಟ್ಟಿದ್ದಾರೆ.

ಈ ಕುರಿತು ವಿಡಿಯೋ ಒಂದನ್ನು ನಿರ್ದೇಶಕ ಪವನ್ ಕುಮಾರ್ ಅವರು ಹಂಚಿಕೊಂಡಿದ್ದಾರೆ.

‘ಲೂಸಿಯಾ ಚಿತ್ರ ಬಿಡುಗಡೆಯಾಗಿ 13 ವರ್ಷಗಳನ್ನು ಪೂರೈಸುತ್ತಿದೆ ಎಂದು ನನಗೆ ತಡವಾಗಿ ಗೊತ್ತಾಯಿತು. ನನಗೆ ಇಷ್ಟು ವರುಷಗಳಲ್ಲಿ ಎರಡನೇ ಭಾಗ ಮಾಡುವ ಯೋಚನೆ ಬಂದಿರಲಿಲ್ಲ. ಆದರೆ 13 ವರುಷಗಳ ನಂತರ ಆ ಮಾತ್ರೆಗಳಿಗೆ ಮತ್ತೊಂದು ಕತೆ ಕೊಡಬಹುದಲ್ವಾ ಅನಿಸುತ್ತಿದೆ.

ಯಾಕೆಂದರೆ ನನಗೆ ಲೂಸಿಯಾ ತುಂಬಾ ಮೆಮೋರೇಬಲ್ ಈವೆಂಟ್. ನನಗೆ ಇವತ್ತಿಗೂ ಯಾರಾದರು ಸಿಕ್ಕಿ ಮಾತನಾಡುವಾಗ ನನ್ನ ಫ್ರೆಂಡ್ ನಿಮ್ಮ ಚಿತ್ರಕ್ಕೆ ಹಣ ಹಾಕಿದ್ದರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ಈ ಚಿತ್ರದಿಂದ ಎಷ್ಟು ಮಂದಿ ಪ್ರತಿಭಾವಂತರು ಬಂದರು ಎಂದರೆ ಆ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕರು ಈಗ ದೊಡ್ಡ ಸ್ಟಾರ್ ಆಗಿದ್ದಾರೆ. ತಂತ್ರಜ್ಞರು ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಆಗ ಲೂಸಿಯಾ ಮಾಡುವಾಗ ನನಗೆ 20 ವರ್ಷ. ಈಗ 44 ವರ್ಷ. ಆಗಿನಷ್ಟು ಮ್ಯಾಡ್‌ನೆಸ್ ಈಗಿಲ್ಲ. ಆದರೂ ಪ್ರಯತ್ನ ಮಾಡೋದರಲ್ಲಿ ತಪ್ಪಿಲ್ಲ. ನಾನು ಮುಂದೆ ಬಂದಿದ್ದೇನೆ. ನಾನು ಒಬ್ಬನೇ ಇದ್ದೇನೆ. ಬನ್ನಿ ವನ್ಸ್ ಮೋರ್ ಲೂಸಿಯಾ’ ಎಂದು ಹೇಳಿಕೊಂಡಿದ್ದಾರೆ.