ಸಾರಾಂಶ
ಚಿತ್ರ: ಹಿರಣ್ಯ
ನಿರ್ದೇಶನ: ಪ್ರವೀಣ್ ಅವ್ಯೂಕ್ತ್
ತಾರಾಗಣ: ರಾಜವರ್ಧನ್, ರಿಹಾನ, ದಿಲೀಪ್ ಶೆಟ್ಟಿ, ದಿವ್ಯಾ ಸುರೇಶ್, ಅರವಿಂದ ರಾವ್
ರೇಟಿಂಗ್: 3
ಆರ್.ಎಸ್.
ಕಾಸಿಗಾಗಿ ಕೊಲೆ ಮಾಡುವ ವ್ಯಕ್ತಿಯೊಬ್ಬನಿಗೆ ಒಂದು ಪುಟ್ಟ ಮಗು ಸಿಗುವ ಕುತೂಹಲಕರ ಕಥಾನಕವಿದು. ಆರಂಭದಲ್ಲಿ ಉಂಟಾಗುವ ಒಂದು ಅಪಘಾತದ ಮೂಲಕ ಕತೆ ತೆರೆದುಕೊಳ್ಳುತ್ತದೆ. ಆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬಳ ಮಗು ಕಿಡ್ನಾಪ್ ಆದ ಕ್ಷಣದಲ್ಲಿ ಕತೆ ವೇಗ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ತಿರುವು ಮುರುವು ರಸ್ತೆ. ನಿಜವಾದ ದುಷ್ಟರು ಯಾರು ಎಂಬ ಹುಡುಕಾಟ. ಕಡೆಗೆ ಮಗು ಮತ್ತು ಹೀರೋ ಏನಾಗುತ್ತಾರೆ ಎಂಬ ಪ್ರಶ್ನೆ.
ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ನಿರ್ದೇಶಕರು ಇಲ್ಲಿ ಸೊಗಸಾಗಿ ದುಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕುತೂಹಲಕರವಾಗಿ ಚಿತ್ರಕತೆ ಹೆಣೆದಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಭಿನ್ನವಾದ ಪಾತ್ರಗಳನ್ನು ತಂದಿದ್ದಾರೆ. ಆಯಾಯ ಪಾತ್ರಕ್ಕೆ ನ್ಯಾಯ ಕೊಡಿಸಿದ್ದಾರೆ. ಹಾಗೆ ನೋಡಿದರೆ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾದಂತೆ ಕಾಣಿಸುತ್ತದೆ. ಆದರೆ ನಿರ್ದೇಶಕರು ಜಾಣ್ಮೆಯಿಂದ ರುಚಿಗೆ ತಕ್ಕಷ್ಟು ಸಸ್ಪೆನ್ಸು, ತಾಯಿ ಸೆಂಟಿಮೆಂಟು, ಚಂದದ ಹಾಡು, ರೋಮಾಂಚಕ ಡಾನ್ಸು ಇಟ್ಟಾದ್ದಾರೆ. ಸಕತ್ತಾಗಿರೋ ಫೈಟುಗಳನ್ನು ಜೋಡಿಸಿದ್ದಾರೆ.
ರಾಜವರ್ಧನ್, ದಿಲೀಪ್ ಶೆಟ್ಟಿ, ರಿಹಾನ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ದಿವ್ಯಾ ಸುರೇಶ್, ಹುಲಿ ಕಾರ್ತಿಕ್ ಪಾತ್ರಗಳು ಸ್ವಲ್ಪವೇ ಸಮಯ ಬಂದು ಹೋದರೂ ಅವರ ಪಾತ್ರ ನಿರ್ವಹಣೆಯಿಂದಾಗಿ ಮನಸಲ್ಲಿ ಉಳಿಯುತ್ತಾರೆ. ಚಿತ್ರಕತೆಯಲ್ಲಿ ಕೆಲವು ಪ್ರಶ್ನೆಗಳನ್ನು ನಿರ್ದೇಶಕರು ಉಳಿಸಿ ಹೋಗುತ್ತಾರೆ. ಆ ಪ್ರಶ್ನೆಗಳಿಗೆ ಉತ್ತಪ ಸಿಕ್ಕಿದ್ದರೆ ಕತೆಗೆ ಪೂರ್ಣತೆ ಸಿಗುತ್ತಿತ್ತು. ಅದರ ಹೊರತಾಗಿ ಒಂದು ಉತ್ತಮ ಕಮರ್ಷಿಯಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಕರು ಕೊಟ್ಟಿದ್ದಾರೆ.