ಇಳಯರಾಜ ಗ್ರೀನ್‌ ಸಿಗ್ನಲ್‌ ಕೊಟ್ಟಾಗ ನಂಬಲಾಗಲಿಲ್ಲ: ಕನ್ನಡತಿ ಖ್ಯಾತಿಯ ರಂಜನಿ ರಾಘವನ್‌

| Published : Jan 02 2025, 12:34 AM IST / Updated: Jan 02 2025, 04:47 AM IST

ಸಾರಾಂಶ

ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಇದಕ್ಕೆ ಇಳಯರಾಜ ಸಂಗೀತವಿದೆ.

 ಸಿನಿವಾರ್ತೆ

‘ನಿಮ್ಮ ಸಿನಿಮಾಗೆ ಸಂಗೀತ ನೀಡಲು ಇಳಯರಾಜ ಸರ್‌ ಆಸಕ್ತರಾಗಿದ್ದಾರೆ ಅನ್ನೋ ಮಾತನ್ನು ಅವರ ಮ್ಯಾನೇಜರ್‌ ಹೇಳಿದಾಗ ಒಂದು ಕ್ಷಣ ನಂಬಲಾಗಲಿಲ್ಲ. ನಮ್ಮಂಥ ಹೊಸಬರ ಸಿನಿಮಾಕ್ಕೆ ಅಂಥ ಸಂಗೀತ ದಿಗ್ಗಜ ಮ್ಯೂಸಿಕ್‌ ಮಾಡೋದು ಅಂದ್ರೇನು..’

- ಹೀಗೆ ಉದ್ಗರಿಸಿದ್ದು ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್‌.

ಈವರೆಗೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟನೆಯ ಮೂಲಕ ಗಮನ ಸೆಳೆದಿದ್ದ ರಂಜನಿ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಸಿನಿಮಾ ಸಂಗೀತ ಕ್ಷೇತ್ರದ ದಂತಕತೆ ಇಳಯರಾಜ ಹಿನ್ನೆಲೆ ಸಂಗೀತ ಹಾಗೂ ಹಾಡುಗಳ ಸಂಯೋಜನೆ ಮಾಡುತ್ತಿದ್ದಾರೆ.

ಈ ಬಗ್ಗೆ ರಂಜನಿ, ‘ನಾನು ಯಾವುದೋ ಕೆಲಸಕ್ಕೆ ಚೆನ್ನೈಗೆ ಹೋಗಿದ್ದಾಗ ನಮ್ಮ ಆಪ್ತರು ಇಳಯರಾಜ ಅವರಿಗೂ ನಿಮ್ಮ ಕಥೆ ಹೇಳಿ ಎಂದು ಇಳಯರಾಜ ಬಳಿ ಕರೆದೊಯ್ದರು. ಸುಮ್ಮನೆ ಹೋಗಿ ಅವರಿಗೆ ನಮಸ್ಕರಿಸಿ ಅವರ ಜೊತೆಗೆ ಒಂದು ಫೋಟೋ ತಗೊಂಡು ಬರೋಣ ಅಂತ ಹೊರಟೆ. ಇಳಯರಾಜ ಅವರಿಗೆ ಕನ್ನಡದಲ್ಲೇ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದೆ. ಕಥೆ ಕೇಳಿ ಒಂದು ಕ್ಷಣ ಸುಮ್ಮನಾದರು. ಆಮೇಲೆ ತಿಳಿಸ್ತೀನಿ ಅಂದರು. ಮೂರೇ ದಿನಕ್ಕೆ ಅವರ ಮ್ಯಾನೇಜರ್‌ ಫೋನ್‌ ಮಾಡಿ ಸಿಹಿ ಸುದ್ದಿ ಕೊಟ್ಟರು’ ಎಂದಿದ್ದಾರೆ.

ಸಿನಿಮಾ ಇದೀಗ ಶೂಟಿಂಗ್‌ ಹಂತದಲ್ಲಿದೆ. ಈ ಸಿನಿಮಾಗೆ ಕಥೆ, ಚಿತ್ರಕಥೆಯನ್ನೂ ರಂಜನಿ ಅವರೇ ಬರೆದಿದ್ದಾರೆ. ಚಿತ್ರದಲ್ಲಿ ನಟಿಸುವ ಬಗ್ಗೆ ಅವರಿನ್ನೂ ನಿರ್ಧಾರಕ್ಕೆ ಬಂದಿಲ್ಲ. ಇದೊಂದು ಸೋಷಿಯೋ ಫ್ಯಾಮಿಲಿ ಮ್ಯೂಸಿಕಲ್‌ ಡ್ರಾಮಾ. ಚಿತ್ರದುದ್ದಕ್ಕೂ ಮ್ಯೂಸಿಕ್‌ ಮಹತ್ವದ ಪಾತ್ರ ವಹಿಸಲಿದೆ. ಹೃದ್ರೋಗ ತಜ್ಞ ಡಾ ಆನಂದ ಕುಮಾರ್‌ ಎಂ ಹಾಗೂ ರಾಮಕೃಷ್ಣ ಸುಬ್ರಹ್ಮಣ್ಯಂ ಈ ಸಿನಿಮಾದ ನಿರ್ಮಾಪಕರು.