ಸಾರಾಂಶ
ರಿಷಬ್ ಶೆಟ್ಟಿ ಪ್ರಸೆಂಟ್ ಮಾಡುತ್ತಿರುವ ಹೊಸ ಕಿರು ವೆಬ್ ಸೀರೀಸ್ ಕಲರ್ಸ್
ಕನ್ನಡಪ್ರಭ ಸಿನಿವಾರ್ತೆ
ಬಣ್ಣಗುರುಡುತನದ ಕುರಿತಾದ ‘ಕಲರ್ಸ್’ ಕಿರು ವೆಬ್ ಸೀರೀಸ್‌ನ ಟ್ರೇಲರ್ ಬಿಡುಗಡೆಯಾಗಿದೆ. ಮೇ 30ಕ್ಕೆ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್‌ನಲ್ಲಿ ‘ಕಲರ್ಸ್’ನ ಆರು ಎಪಿಸೋಡ್‌ಗಳು ಬಿಡುಗಡೆಯಾಗಲಿವೆ. ಉತ್ಸಾಹಿ ಯುವ ನಿರ್ದೇಶಕ ಶ್ರೀಕರ ಭಟ್ ಈ ಕಿರು ಸೀರೀಸ್ ನಿರ್ದೇಶನ ಮಾಡಿದ್ದಾರೆ. ಶ್ರೀಕರ್ ಭಟ್, ‘ಒಟ್ಟು 55 ನಿಮಿಷಗಳ ಕತೆ ಇದು. 10 ನಿಮಿಷಗಳ ಆರು ಎಪಿಸೋಡ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡದ ಮಟ್ಟಿಗೆ ಈ ಪ್ರಕಾರ ಹೊಸತು. ಬಣ್ಣಗುರುಡುತನ ಈ ಕಥೆಯ ಪ್ರಧಾನ ಅಂಶ. ನವಿರಾದ ಲವ್‌ಸ್ಟೋರಿಯ ಹಿನ್ನೆಲೆಯೂ ಇದೆ. ಜನ್ಮವಿಡೀ ಕಾಣದ ಬಣ್ಣವೊಂದನ್ನು ಮೊದಲ ಸಲ ನೋಡಿದಾಗ ಆಗುವ ಅನುಭವವನ್ನು ಅದೇ ತೀವ್ರತೆಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಇದರಲ್ಲಿ ಮಾಡಿದ್ದೇವೆ’ ಎನ್ನುತ್ತಾರೆ. ‘ಕಂಬ್ಳಿ ಹುಳ’ ಸಿನಿಮಾದಲ್ಲಿ ನಟಿಸಿದ್ದ ಅಶ್ವಿತಾ ಹೆಗ್ಡೆ ಹಾಗೂ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ ಚೇತನ್ ಕುಮಾರ್ ಧರ್ಮಪ್ಪ ಪ್ರಧಾನ ಪಾತ್ರದಲ್ಲಿದ್ದಾರೆ.