ಸಾರಾಂಶ
ರವೀಂದ್ರ ವೆಂಶಿ ನಿರ್ದೇಶನದ ಟೇಕ್ವಾಂಡೋ ಗರ್ಲ್ ಚಿತ್ರ ಇದೇ ಆಗಸ್ಟ್ 30ಕ್ಕೆ ತೆರೆ ಮೇಲೆ ಬರುತ್ತಿದೆ. ವಿಶೇಷವಾದ ಕತೆಯನ್ನು ಒಳಗೊಂಡ ಸಾಹಸಮಯ ಸಿನಿಮಾ ಇದಾಗಿದೆ.
ಕನ್ನಡಪ್ರಭ ಸಿನಿವಾರ್ತೆ
ರವೀಂದ್ರ ವೆಂಶಿ ನಿರ್ದೇಶನದ ‘ಟೇಕ್ವಾಂಡೋ ಗರ್ಲ್’ ಚಿತ್ರ ಆಗಸ್ಟ್ 30ಕ್ಕೆ ತೆರೆ ಕಾಣುತ್ತಿದೆ. ಚಿತ್ರದ ಟೀಸರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಿದ್ದಾರೆ. ಬಾಲ ನಟಿ ಋತುಸ್ಪರ್ಶ ಈ ಚಿತ್ರದ ಮುಖ್ಯ ಪಾತ್ರಧಾರಿ.ರವೀಂದ್ರ ವೆಂಶಿ, ‘ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವ ಸಮಯದಲ್ಲಿ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ರೋಲ್ ಮಾಡೆಲ್ ಆಗುತ್ತಾಳೆ ಎಂಬುದು ಚಿತ್ರದ ಕತೆ. ಈಗ 5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆ ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತಾರಾಷ್ಟ್ರೀಯ ಚಾಂಪಿಯನ್‌ನಲ್ಲಿ ಭಾಗವಹಿಸಿದ್ದಾರೆ. ರಿಯಲ್ ಟೇಕ್ವಾಂಡೋ ಪ್ರತಿಭೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿರುವ ಖುಷಿ ಇದೆ’ ಎಂದರು.
ಚಿತ್ರದ ನಿರ್ಮಾಪಕಿ ಡಾ. ಸುಮೀತಾ ಪ್ರವೀಣ್, ‘ಇದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕಾದ ಸಿನಿಮಾ. ಹೀಗಾಗಿ ವಿದ್ಯಾರ್ಥಿಗಳಿಗಾಗಿ ಟಿಕೆಟ್‌ನಲ್ಲಿ ಶೇ. 50ರಷ್ಟು ಕಡಿಮೆ ಮಾಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡಿದ್ದೇವೆ’ ಎಂದರು.