ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಬಾಣಾವರದ ಪ್ರಾಚೀನ ಹಾಗೂ ಐತಿಹಾಸಿಕ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮಹಾದಿವ್ಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪೂಜೆಗಳು ಮತ್ತು ರಥೋತ್ಸವವು ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಸಿತು.ಜಾತ್ರಾ ಮಹೋತ್ಸವದ ಆರಂಭದಲ್ಲಿ ಶ್ರೀ ಆಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಕಲ್ಲತ್ತಗಿರಿಯ ಪುಣ್ಯಕ್ಷೇತ್ರಕ್ಕೆ ಕರೆದೊಯ್ದು ಅಲ್ಲಿ ಗಂಗಾಸ್ನಾನ, ಅಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಿಸಲಾಯಿತು. ಬಳಿಕ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಧ್ವಜಾರೋಹಣ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.ಪೂಜಾ ಕಾರ್ಯಕ್ರಮಗಳಲ್ಲಿ ಹಂಸ ವಾಹನೋತ್ಸವ, ಮಯೂರ ವಾಹನೋತ್ಸವ, ಗಣಪತಿ ಹೋಮ, ಆಂಜನೇಯ ಹೋಮ, ರಾಮತಾರಕ ಹೋಮ, ಬ್ರಹ್ಮ ಹೋಮ, ರುದ್ರ ಹೋಮ, ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಹಾಗೂ ಕಳಸಾಭಿಷೇಕ ವಿಶೇಷ ಆಕರ್ಷಣೆಯಾಗಿದ್ದವು. ಅದೇ ರೀತಿ ಗಜೇಂದ್ರ ಮೋಕ್ಷ, ಕಲ್ಯಾಣೋತ್ಸವ, ರಥ ಕಳಸ ಸ್ಥಾಪನೆ, ಯಾತ್ರಾದಾನ ಪೂರ್ವಕ ಶ್ರೀಕೃಷ್ಣ ಗಂಧೋತ್ಸವ ಮುಂತಾದ ಧಾರ್ಮಿಕ ವಿಧಿವಿಧಾನಗಳೂ ಭಕ್ತಿಭಾವದಿಂದ ನೆರವೇರಿದವು.ಜಾತ್ರಾ ಮಹೋತ್ಸವದ ಮತ್ತೊಂದು ವಿಶೇಷವೆಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಪಾನಕದ ಗಾಡಿಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿ ಓಡಿಸಲ್ಪಟ್ಟವು. ಈ ಅಪರೂಪದ ಸಂಪ್ರದಾಯ ಜಾತ್ರೆಗೆ ಮತ್ತಷ್ಟು ವಿಶೇಷ ಮೆರಗು ನೀಡಿತು. ಜೊತೆಗೆ, ಬಾಣಾವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮದೇವರುಗಳನ್ನು ಕರೆತಂದು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.ಜಾತ್ರಾ ಮಹೋತ್ಸವದಲ್ಲಿ ಬಾಣಾವರ ಗ್ರಾ.ಪಂ ಅಧ್ಯಕ್ಷ ಬಿ.ಎಚ್. ಸಂಜಯ್, ರಥೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ಜಿ. ವೆಂಕಟೇಶ್, ಅಧ್ಯಕ್ಷ ಬಿ.ಸಿ. ಶ್ರೀನಿವಾಸ್, ಕಾರ್ಯದರ್ಶಿ ದೀಪಕ್ ಹಿರೇಮಠ್, ಉಪಾಧ್ಯಕ್ಷ ಬಿ.ಆರ್. ಶ್ರೀಧರ್, ಖಜಾಂಚಿ ಪಿ.ಜಿ. ಶ್ರೀಕಾಂತ್, ಸಹ ಕಾರ್ಯದರ್ಶಿ ಬಿ.ಎಸ್. ಶಶಿಕುಮಾರ್, ಜಿ.ಪಂ ಮಾಜಿ ಸದಸ್ಯ ಬಿ.ಎಸ್. ಅಶೋಕ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ. ರವಿಶಂಕರ್, ಲಕ್ಷ್ಮಿ ಶ್ರೀಧರ್, ಗ್ರಾಂ.ಪಂ ಸದಸ್ಯ ಬಿ.ಆರ್. ಸುರೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಜಯಣ್ಣ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪರಮೇಶ್ವರ್ ಸೇರಿ ಗಣ್ಯರು ಭಾಗವಹಿಸಿದ್ದರು.