ಫೆ.೧೬ರಂದು ‘ಲೇಡಿಸ್ ಬಾರ್’ ಚಿತ್ರ ಬಿಡುಗಡೆ

| Published : Feb 09 2024, 01:47 AM IST

ಸಾರಾಂಶ

ಲೇಡಿಸ್ ಬಾರ್ ಚಿತ್ರದಲ್ಲಿ ಪ್ರಸ್ತುತ ನಡೆಯುವ ಸನ್ನಿವೇಶದೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾರ್ ಇದ್ದರೆ ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಕಥಾ ಹಂದರವನ್ನು ಹೆಣೆಯಲಾಗಿದ್ದು, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಬಾರ್‌ನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಡಿಎಂಸಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಲೇಡಿಸ್ ಬಾರ್ ಚಿತ್ರ ಫೆ.೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರನಿರ್ದೇಶಕ ಎ.ಎನ್. ಮುತ್ತು ತಿಳಿಸಿದರು.

ಪ್ರಸ್ತುತ ನಡೆಯುವ ಸನ್ನಿವೇಶದೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾರ್ ಇದ್ದರೆ ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಕಥಾ ಹಂದರವನ್ನು ಹೆಣೆಯಲಾಗಿದ್ದು, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಬಾರ್‌ನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಶೇ. ೭೫ರಷ್ಟು ಚಿತ್ರೀಕರಣ ನಡೆಸಿದ್ದು, ಉಳಿದಂತೆ ಮದ್ದೂರು ಮತ್ತು ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ನಾಲ್ಕು ಹಾಡುಗಳು ಇವೆ. ಇದರಲ್ಲಿ ನಾಯಕ ಅಥವಾ ನಾಯಕಿ ಇರುವುದಿಲ್ಲ. ಚಿತ್ರಕಥೆಯೇ ನಾಯಕ-ನಾಯಕಿಯರನ್ನು ನಿರೂಪಿಸುತ್ತದೆ ಎಂದರು.

ಮದ್ದೂರಿನ ತೈಲೂರಿನವರೇ ಆದ ಟಿ.ಎಂ. ಸೋಮಶೇಖರ್ ಅವರು ಚಿತ್ರ ನಿರ್ಮಾಪಕರಾಗಿದ್ದು, ತಾರಾಗಣದಲ್ಲಿ ಹಾಸನದ ಶಿವಾನಿಗೌಡ ಹಾಗೂ ಮಂಡ್ಯದ ಪ್ರೇರಣಾ ಇತರರು ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ವೀನಸ್‌ಮೂರ್ತಿ ಚಿತ್ರೀಕರಮ ಮಾಡಿದ್ದಾರೆ ಎಂದರು.

ಚಿತ್ರನಿರ್ಮಾಪಕ ಟಿ.ಎಂ.ಸೋಮಶೇಖರ್ ಮಾತನಾಡಿ, ಮದ್ದೂರಿನ ತೈಲೂರಿನವನಾದ ನಾನು ರೈತ ಕುಟುಂಬದಿಂದ ಬಂದಿದ್ದು, ಚಿತ್ರೋಧ್ಯಮದಲ್ಲಿ ಕೆಲಸ ಮಾಡಿದ್ದೇನೆ. ಇದೀಗ ನಾನೇ ಚಿತ್ರ ನಿರ್ಮಾಣ ಮಾಡಬೇಕೆಂಬ ಬಯಕೆಯಿಂದ ಲೇಡಿಸ್ ಬಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾಗಿ ತಿಳಿಸಿದರು.

ಸಾಮಾಜಿಕ ಕಳಕಳಿ ಇಟ್ಟುಕೊಂಡು ಚಿತ್ರಮಾಡಿದ್ದೇವೆ. ಇದೊಂದು ವಿಭಿನ್ನ ಚಿತ್ರಕಥೆಯನ್ನು ಹೊಂದಿದೆ. ನಾಲ್ಕು ಕುಟುಂಬಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಫೆ. ೧೬ರಂದು ರಾಜ್ಯಾದ್ಯಂತ ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯುತ್ತದೆ. ಎಲ್ಲರೂ ಚಿತ್ರಮಂದಿರಕ್ಕೇ ಹೋಗಿ ಚಿತ್ರ ನೋಡಬೇಕು ಎಂದು ಮನವಿ ಮಾಡಿದರು.

ನಟಿಯರಾದ ಪ್ರೇರಣಾ, ಶಿವಾನಿಗೌಡ, ಛಾಯಾಗ್ರಾಹಕ ವೀನಸ್‌ಮೂರ್ತಿ ಗೋಷ್ಠಿಯಲ್ಲಿದ್ದರು.