ಭಾನುವಾರ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

| Published : Jul 15 2024, 01:57 AM IST / Updated: Jul 15 2024, 05:04 AM IST

ಭಾನುವಾರ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಂದಿಬೆಟ್ಟ ಸೇರಿದಂತೆ ರಾಜ್ಯದ ಪ್ರಮುಖ ಗಿರಿಧಾಮಗಳು, ಹಂಪಿಯಂಥ ಪ್ರಮುಖ ಪ್ರವಾಸಿ ತಾಣಗಳಿಗೆ ವಾರಾಂತ್ಯದ ದಿನವಾದ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು.

 ಬೆಂಗಳೂರು :  ಚಿಕ್ಕಮಗಳೂರು, ನಂದಿಬೆಟ್ಟ ಸೇರಿದಂತೆ ರಾಜ್ಯದ ಪ್ರಮುಖ ಗಿರಿಧಾಮಗಳು, ಹಂಪಿಯಂಥ ಪ್ರಮುಖ ಪ್ರವಾಸಿ ತಾಣಗಳಿಗೆ ವಾರಾಂತ್ಯದ ದಿನವಾದ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು.

ವಿಶ್ವವಿಖ್ಯಾತ ಹಂಪಿ ಮತ್ತು ಜೋಗ ಜಲಪಾತವನ್ನು ಒಂದೇ ದಿನ 20 ಸಾವಿರಕ್ಕೂ ಹೆಚ್ಚು ಜನ ಕಣ್ತುಂಬಿಕೊಂಡರೆ, ಚಿಕ್ಕಮಗಳೂರಿನ ಗಿರಿಧಾಮದಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಸೇರಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್‌ ಆಗಿತ್ತು. ಬೆಂಗಳೂರು ಸಮೀಪದ ನಂದಿಗಿರಿಧಾಮಕ್ಕೂ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಸುಮಾರು 5 ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಹಂಪಿಯಲ್ಲಿ ಮತ್ತೆ ಕಲರವ: ಬಿರುಬೇಸಿಗೆಯಿಂದಾಗಿ ಕಂಗೆಟ್ಟಿದ್ದ ಹಂಪಿ ಪ್ರವಾಸೋದ್ಯಮ ಮತ್ತೆ ಚಿಗಿತುಕೊಂಡಿದೆ. ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶದಿಂದ ಒಂದೇ ದಿನ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿ, ಬಸವಣ್ಣ ಮಂಟಪ, ಶ್ರೀಕೃಷ್ಣ ದೇವಾಲಯ, ಕಡಲೆಕಾಳು ಗಣಪ ಮಂಟಪ, ಸಾಸಿವೆಕಾಳು ಗಣಪ ಮಂಟಪ, ಉದ್ಧಾನ ವೀರಭದ್ರೇಶ್ವರ ದೇವಸ್ಥಾನ, ಅಕ್ಕ-ತಂಗಿಯರ ಗುಡ್ಡ, ಉಗ್ರ ನರಸಿಂಹ, ಬಡವಿಲಿಂಗ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ಕಮಲ ಮಹಲ್‌, ಗಜಶಾಲೆ ಮತ್ತಿತರ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಕಳೆದ ಕೆಲ ತಿಂಗಳಿನಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ಬಿಸಿಲಿನ ಹೊಡೆತದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿಯತ್ತ ಬರುತ್ತಿರಲಿಲ್ಲ. ಈಗ ವಾತಾವರಣದಲ್ಲೂ ಬದಲಾವಣೆ ಆಗಿದೆ. ಹಾಗಾಗಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ಜೋಗ ವೈಭವ ಕಣ್ತುಂಬಿಕೊಂಡ್ರು: ಶರಾವತಿ ಜಲಾಯನ ಪ್ರದೇಶದಲ್ಲಿ ಆರಿದ್ರಾ ಮಳೆ ಅಬ್ಬರಿಸುತ್ತಿದ್ದು, ಜೋಗ ಜಲಪಾತ ರಮಣೀಯ ದೃಶ್ಯ ವೈಭವ ಕಣ್ತುಂಬಿಕೊಳ್ಳುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಸಾಕಷ್ಟು ಅನನುಕೂಲತೆಯ ನಡುವೆಯೂ ಸುರಿಯುವ ಮಳೆಯ ನಡುವೆಯೂ 10 ಸಾವಿರಕ್ಕೂ ಹೆಚ್ಚು ಮಂದಿ ಜಲಪಾತವನ್ನು ವೀಕ್ಷಿಸಿದರು.ಟ್ರಾಫಿಕ್‌ ಜಾಮ್‌: ಇನ್ನು ಚಿಕ್ಕಮಗಳೂರಲ್ಲಿ ಶನಿವಾರದಿಂದಲೂ ಪ್ರವಾಸಿಗರ ದಟ್ಟಣೆ ಇದ್ದು, ಭಾನುವಾರ ಸುಮಾರು 1500ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಆಗಮಿಸಿದ್ದು, 7000ಕ್ಕೂ ಹೆಚ್ಚು ಪ್ರವಾಸಿಗರು ಗಿರಿಶಿಖರಗಳಲ್ಲಿ ವಿಹರಿಸಿದರು. ಇದರಿಂದ ಕೆಲಕಾಲ ಮುಳ್ಳಯ್ಯನಗಿರಿ ಮತ್ತಿತರ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿ ಪ್ರವಾಸಿಗರು ಪ್ರಯಾಸ ಪಡಬೇಕಾಯಿತು.

ಇನ್ನು ಬೆಂಗಳೂರು ಸಮೀಪದ ನಂದಿಬೆಟ್ಟದ ಸೊಬಗು ವೀಕ್ಷಣೆಗೆ ಮುಂಜಾನೆಯೇ ನೂರಾರು ವಾಹನಗಳಲ್ಲಿ ಜನ ಆಗಮಿಸಿದ್ದು, ಇದರಿಂದ 5 ಕಿ.ಮೀ. ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.