ನಟ ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಅವರ ನಟನೆಯ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಈಗಾಗಲೇ ಚಿತ್ರದ ಪ್ರಮುಖ ಪಾತ್ರಧಾರಿಗಳ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ.
ಸಿನಿವಾರ್ತೆ
ನಟ ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಅವರ ನಟನೆಯ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಈಗಾಗಲೇ ಚಿತ್ರದ ಪ್ರಮುಖ ಪಾತ್ರಧಾರಿಗಳ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಇನ್ನೂ ಬಹುಭಾಷೆಯಲ್ಲಿ ಮೂಡಿ ಬರಲಿರುವ ಚಿತ್ರದ ಟೀಸರ್ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.
ಅಭಿಮಾನಿಗಳಿಗೆ ಯಶ್ ಪತ್ರ
ಈ ವರ್ಷವೂ ನಟ ಯಶ್ ಅವರು ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ನಟ ಯಶ್ ಅವರು ಪ್ರೀತಿಯಿಂದ ಪತ್ರ ಬರೆದು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
‘ನೀವು ನನ್ನ ಭೇಟಿ ಮಾಡುವುದಕ್ಕೆ ಎಷ್ಟು ಕಾತುರದಿಂದ ಕಾಯುತ್ತಿದ್ದೀರಿ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಿಜ ಹೇಳಬೇಕು ಅಂದರೆ ಈ ವರ್ಷದ ನನ್ನ ಹುಟ್ಟುಹಬ್ಬದ ಸಂಭ್ರಮಕ್ಕೆ ನಿಮ್ಮನ್ನು ಭೇಟಿಯಾಗಲು ನಿಮ್ಮಷ್ಟೇ ಕಾತುರದಿಂದ ನಾನೂ ಕೂಡ ಕಾಯುತ್ತಿದ್ದೆ. ಆದರೆ, ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮಾಡಬೇಕಿರುವುದರಿಂದ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ನಿಮ್ಮನ್ನು ಈ ವರ್ಷವೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಶೀಘ್ರದಲ್ಲೇ ಭೇಟಿ ಆಗುತ್ತೇನೆಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಈಗ ನೀವು ನನಗೆ ಕಳುಹಿಸುತ್ತಿರುವ ಶುಭಾಶಯಗಳನ್ನು ನಾನು ವೈಯಕ್ತಿಕವಾಗಿ ನೋಡುತ್ತಿದ್ದೇನೆ. ನಿಮ್ಮ ಅಭಿಮಾನದ ಶುಭಾಶಗಳನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ತಮ್ಮ ಅಭಿಮಾನಿಗಳಿಗೆ ಯಶ್ ಅವರು ತಿಳಿಸಿದ್ದಾರೆ.
ಮಾರ್ಚ್ 19ಕ್ಕೆ ವಿಶ್ವದಾದ್ಯಂತ ತೆರೆಗೆ
ಗೀತು ಮೋಹನ್‌ದಾಸ್ ನಿರ್ದೇಶಿಸಿ, ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್‌ಸ್ಟರ್ ಕ್ರಿಯೇಷನ್ ಮೂಲಕ ನಿರ್ಮಾಣ ಆಗುತ್ತಿರುವ ‘ಟಾಕ್ಸಿಕ್’ ಚಿತ್ರ ಇದೇ ವರ್ಷ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ.


