ಭಟ್ಟರ ಗ್ಯಾಂಗಿನ ಹೊಸ ಸಿನಿಮಾ ಉಡಾಳ

| Published : Feb 09 2024, 01:47 AM IST

ಸಾರಾಂಶ

ನಿರ್ದೇಶಕ ಯೋಗರಾಜ್ ಭಟ್ ಅವರ ತಂಡದಿಂದ ಮತ್ತೊಂದು ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಇತ್ತೀಚೆಗಷ್ಟೆ ನಟ ಡಾಲಿ ಧನಂಜಯ್ ಅವರು ಚಾಲನೆ ನೀಡಿದರು.

ಕನ್ನಡಪ್ರಭ ಸಿನಿವಾರ್ತೆ

ಪೃಥ್ವಿ ಶಾಮನೂರ್‌ ಹಾಗೂ ಹೃತಿಕ ಶ್ರೀನಿವಾಸ್‌ ನಟನೆಯ ‘ಉಡಾಳ’ ಚಿತ್ರದ ಶೀರ್ಷಿಕೆಯನ್ನು ನಟ ಡಾಲಿ ಧನಂಜಯ್‌ ಅವರು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಅಮೋಲ್‌ ಪಾಟೀಲ್‌ ನಿರ್ದೇಶನದ ಈ ಚಿತ್ರವನ್ನು ಯೋರಾಜ್‌ ಭಟ್‌ ಹಾಗೂ ರವಿ ಶಾಮನೂರ್‌ ನಿರ್ಮಿಸುತ್ತಿದ್ದಾರೆ.

ಅಮೋಲ್‌ ಪಾಟೀಲ್‌ ಮಾತನಾಡಿ, ‘ಇದು ಸಂಪೂರ್ಣವಾಗಿ ಬಿಜಾಪುರದಲ್ಲಿ ನಡೆಯುವ ಕತೆ. ಮನರಂಜನೆಯೇ ಚಿತ್ರದ ಪ್ರಧಾನ ವಸ್ತು. ಒಂದು ಒಳ್ಳೆಯ ತಂಡದ ಜತೆಗೆ ಸಿನಿಮಾ ಮಾಡುತ್ತಿರುವ ಖುಷಿ ಇದೆ. ಟೂರಿಸ್ಟ್‌ ಗೈಡ್‌ ಆಗಿರುವವನ ಸುತ್ತ ಸಾಗುವ ಕತೆ ಇಲ್ಲಿದೆ’ ಎಂದರು.

ಪೃಥ್ವಿ ಶಾಮನೂರ್‌ ಮಾತನಾಡಿ, ‘ಪದವಿಪೂರ್ವ ಚಿತ್ರದ ನಂತರ ಮತ್ತೊಮ್ಮೆ ಯೋಗರಾಜ್‌ ಭಟ್‌ ಅವರ ತಂಡದ ಜತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ. ನಾನು ಇಲ್ಲಿ ಟೂರಿಸ್ಟ್‌ ಗೈಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು. ಹೃತಿಕಾ ಶ್ರೀನಿವಾಸ್, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರ್‌ ಸಂಗೀತ ನಿರ್ದೇಶಕ ಚೇತನ್‌, ಛಾಯಾಗ್ರಾಹಕ ಶಿವಶಂಕರ್‌ ನೂರಂಬಡ ಹಾಜರಿದ್ದು, ಚಿತ್ರದ ಕುರಿತು ಮಾತನಾಡಿದರು.