ಸಾರಾಂಶ
ಚಿಕ್ಕಣ್ಣ ಮೊದಲ ಬಾರಿಗೆ ನಟಿಸಿರುವ ಉಪಾಧ್ಯಕ್ಷ ಸಿನಿಮಾ ಹಾಸ್ಯ ಪ್ರಧಾನ ಕತೆಯನ್ನು ಒಳಗೊಂಡಿದೆ.
ಚಿತ್ರ: ಉಪಾಧ್ಯಕ್ಷ
ತಾರಾಗಣ: ಚಿಕ್ಕಣ್ಣ, ಮಲೈಕಾ, ರವಿಶಂಕರ್, ಸಾಧು ಕೋಕಿಲಾ, ವೀಣಾ ಸುಂದರ್, ಧರ್ಮಣ್ಣ ಕಡೂರು, ಕೀರ್ತಿರಾಜ್ ನಿರ್ದೇಶನ: ಅನಿಲ್ ಕುಮಾರ್‌ರೇಟಿಂಗ್: 3ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಹಾಸ್ಯ ಘಟನೆಗಳ ಒಟ್ಟು ಮಿಶ್ರಣವೇ ‘ಉಪಾಧ್ಯಕ್ಷ’. ಆಗ ‘ಅಧ್ಯಕ್ಷ’ನಾಗಿ ಬಂದ ಶರಣ್, ಊರಿನ ಗೌಡನ ದೊಡ್ಡ ಮಗಳನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ‘ಉಪಾಧ್ಯಕ್ಷ’ನಾಗಿ ಬಂದ ಚಿಕ್ಕಣ್ಣನಿಗೆ ಅದೇ ಊರಿನ ಗೌಡನ ಎರಡನೇ ಮಗಳ ಜತೆಗೆ ಪ್ರೀತಿ ಹುಟ್ಟಿಕೊಳ್ಳುವುದನ್ನು ತೆರೆ ಮೇಲೆ ನೋಡಬಹುದು. ಹೀಗಾಗಿ ಈ ಚಿತ್ರವನ್ನು ‘ಅಧ್ಯಕ್ಷ’ನ ಪಾರ್ಟ್ 2 ಎಂಬುದೇ ಸೂಕ್ತ.ತನ್ನ ಮಾಡಿಕೊಂಡ ಸಾಲ ತೀರಿಸಲು ಗೌಡನ ಮನೆಯಲ್ಲಿ ಕೂಲಿಯಾಗುವ ಚಿತ್ರದ ನಾಯಕ. ಕುಡಿತಕ್ಕೆ ದಾಸನಾದ ನಾಯಕನ ತಂದೆ, ಗೌಡನ ಬಳಿ ಪದೇಪದೆ ಹಣ ತೆಗೆದುಕೊಂಡು ಮಗನನ್ನು ಖಾಯಂ ಕೂಲಿಗಾರನಾಗಿ ಮಾಡಿರುತ್ತಾನೆ. ಈಗ ತನ್ನ ಮನೆಯಲ್ಲಿ ಕೆಲಸ ಮಾಡುವ ಈ ಕೂಲಿಗೂ ಮತ್ತು ಗೌಡನ ಮಗಳಿಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆದರೆ, ಆಕೆಗೆ ಸಿನಿಮಾಗಳ ಹುಚ್ಚು. ತಾನು ಪ್ರೀತಿಸುವ ಕೆಲಸದವನನ್ನು ತಾನು ನೋಡುವ ಸಿನಿಮಾಗಳ ಹೀರೋಗಳಂತೆ ಕಲ್ಪಿಸಿಕೊಳ್ಳುತ್ತಾಳೆ. ಈಗ ಇಬ್ಬರು ಮನೆ ಬಿಟ್ಟು ಹೋಗುತ್ತಾರೆ. ಮುಂದಿನದ್ದು ತೆರೆ ಮೇಲೆ ನೋಡಬೇಕು. ಗೌಡನ ಮನೆಯಲ್ಲಿ ಕೆಲಸ ಮಾಡುವ ಕೂಲಿಯ ಪಾತ್ರದಲ್ಲಿ ಚಿಕ್ಕಣ್ಣ ಮಿಂಚಿದ್ದಾರೆ, ಅದೇ ಗೌಡನ ಮಗಳ ಪಾತ್ರದಲ್ಲಿ ಮಲೈಕಾ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ರವಿಶಂಕರ್ ಅವರು ಗೌಡನಾಗಿ ಘರ್ಜಿಸಿದ್ದಾರೆ. ಸಾಧು ಕೋಕಿಲಾ, ಚಿಕ್ಕಣ್ಣ ಜತೆಗೆ ಧರ್ಮಣ್ಣ ಕಡೂರು, ಸಾಧು ಕೋಕಿಲಾ ಕೂಡ ನಗಿಸುವ ಸಾಹಸ ಮಾಡಿದ್ದಾರೆ. ಹಾಡು, ನಗು, ಪ್ರೀತಿ ಎಮೋಷನ್ ಚಿತ್ರದ ಮುಖ್ಯಾಂಶಗಳು.