ಮೀಸಲು ಕುರಿತ ರಾಹುಲ್‌ ಗಾಂಧಿ ಹೇಳಿಕೆಗೆ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಬೆಂಬಲ : ವಿವಾದ

| Published : Oct 26 2024, 12:55 AM IST / Updated: Oct 26 2024, 06:12 AM IST

ಸಾರಾಂಶ

ಮೀಸಲಾತಿ ರದ್ದತಿ ಬಗೆಗಿನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ ಬೆಂಬಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಮುಂಬೈ: ಮೀಸಲಾತಿ ರದ್ದತಿ ಬಗೆಗಿನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ ಬೆಂಬಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ. ‘ದೇಶದಲ್ಲಿ ಸಮಾನತೆ ಸ್ಥಾಪನೆಯಾದಾಗ ಮಾತ್ರ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತದೆ ಎಂದು ರಾಹುಲ್‌ ಹೇಳಿದ್ದರು. ಇದರಲ್ಲೇನು ತಪ್ಪಿದೆ?’ ಎಂದು ಪಟೋಲೆ ಪ್ರಶ್ನಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ‘ದೇಶದಲ್ಲಿ ಮೀಸಲಾತಿಯನ್ನು ತೆಗೆದುಹಾಕಲು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿದೆ’ ಎಂದು ಆರೋಪಿಸಿದ್ದು, ‘ಬಿಜೆಪಿ ಹಾಗೂ ಮೋದಿ ಅಧಿಕಾರದಲ್ಲಿ ಇರುವವರೆಗೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಅಂಬೇಡ್ಕರ್‌ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪಟೋಲೆ, ‘ಸಂವಿಧಾನವು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಿದ್ಧಾಂತದ ಕೇಂದ್ರಬಿಂದುವಾಗಿದೆ. ಮೀಸಲಾತಿ ಕುರಿತು ಅಂಬೇಡ್ಕರ್ ಅವರ ಅಭಿಪ್ರಾಯವನ್ನೇ ರಾಹುಲ್‌ ಹೇಳಿದರು. ಸಂವಿಧಾನದ ಬಗ್ಗೆ ಏನೂ ತಿಳಿಯದ ಬಿಜೆಪಿ ಸುಳ್ಳು ಮಾಹಿತಿ ಹರಡುತ್ತಿದೆ’ ಎಂದರು.