ಸಾರಾಂಶ
ಅಮೃತಸರ: ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆಯ ಭಾಗವಾಗಿ 104 ಭಾರತೀಯರನ್ನು ಅಮೆರಿಕ ಸರ್ಕಾರವು ಭಾರತಕ್ಕೆ ಕಳುಹಿಸಿದೆ. 104 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ಸೇನಾಪಡೆಯ ವಿಮಾನ ಬುಧವಾರ ಮಧ್ಯಾಹ್ನ 1.55ಕ್ಕೆ ಪಂಜಾಬ್‌ನ ಅಮೃತಸರದಲ್ಲಿರುವ ಶ್ರೀ ಗುರುರಾಮ್‌ದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಇದು ಟ್ರಂಪ್ 2.0 ಅವಧಿಯಲ್ಲಿ ಅಮೆರಿಕದಿಂದ ಗಡೀಪಾರುಗೊಳ್ಳುತ್ತಿರುವ ಭಾರತೀಯ ಅಕ್ರಮ ವಲಸಿಗರ ಮೊದಲ ಬ್ಯಾಚ್ ಇದಾಗಿದ್ದು, ಇನ್ನೂ ಸಾವಿರಾರು ಮಂದಿಯನ್ನು ಇದೇ ರೀತಿ ಗಡೀಪಾರು ಮಾಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಭಾರತಕ್ಕೆ ಬಂದಿಳಿದವರಲ್ಲಿ ಹರ್ಯಾಣ ಮತ್ತು ಗುಜರಾತ್ ತಲಾ 33, ಮಹಾರಾಷ್ಟ್ರ, ಉತ್ತರಪ್ರದೇಶದ ತಲಾ ಇಬ್ಬರು, ಚಂಡೀಗಢದ ಇಬ್ಬರು ಸೇರಿದ್ದಾರೆ. ಗಡೀಪಾರಾದವರಲ್ಲಿ 48 ಮಂದಿ 25 ವರ್ಷಕ್ಕಿಂತ ಕೆಳಗಿನವರಾಗಿದ್ದು, 12 ಅಪ್ರಾಪ್ತರು ಮತ್ತು 25 ಮಹಿಳೆಯರೂ ಸೇರಿದ್ದಾರೆ. 4 ವರ್ಷದ ಮಗು ಕೂಡ ಈ ಪಟ್ಟಿಯಲ್ಲಿದೆ.
ಅಮೆರಿಕದ ಸಿ-17 ಮಿಲಿಟರಿ ವಿಮಾನವು ಈ ಹಿಂದೆ 205 ಮಂದಿ ವಲಸಿಗರನ್ನು ಹೊತ್ತುಕೊಂಡು ಭಾರತದತ್ತ ಹೊರಟಿದೆ ಎಂದು ಆರಂಭದಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ 104 ಮಂದಿಯನ್ನಷ್ಟೇ ಕಳುಹಿಸಿಕೊಡಲಾಗಿದೆ.
ವಿಮಾನದಲ್ಲಿ ಆಗಮಿಸಿದವರ ಆರೋಗ್ಯ ತಪಾಸಣೆ ಮಾಡಿ ಅವರವರ ತವರು ರಾಜ್ಯಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ.
ಅಮೆರಿಕದಲ್ಲಿ ಸುಮಾರು 7.25 ಲಕ್ಷ ಮಂದಿ ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ 18000 ಜನರನ್ನು ತವರಿಗೆ ಕಳುಹಿಸುವ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ.
ಕೈಕೊಳ ತೊಡಿಸಿ ಭಾರತೀಯರ ಗಡೀಪಾರು: ಕಾಂಗ್ರೆಸ್ ಆರೋಪ
ನವದೆಹಲಿ: ಭಾರತೀಯ ಅಕ್ರಮ ವಲಸಿಗರನ್ನು ಕೈಕೊಳ ತೊಡಿಸಿ ಮತ್ತು ಅಮಾನೀಯವಾಗಿ ನಡೆಸಿಕೊಳ್ಳಲಾಗಿದೆ. ಈ ಫೋಟೋಗಳನ್ನು ನೋಡಿ ತೀವ್ರ ಬೇಸರವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಜತೆಗೆ, 2013ರಲ್ಲಿ ಭಾರತದ ರಾಯಭಾರ ಕಚೇರಿ ಸಿಬ್ಬಂದಿ ದೇವಯಾನಿ ಖೋಬ್ರಾಗಡೆ ಜತೆಗಿನ ವರ್ತನೆಗೆ ಸಂಬಂಧಿಸಿ ಆಗಿನ ಯುಪಿಎ ಸರ್ಕಾರ ನೀಡಿದ ಪ್ರತ್ಯುತ್ತರದ ಬಳಿಕ ಅಮೆರಿಕವು ವಿಷಾದ ವ್ಯಕ್ತಪಡಿಸಿದ ಪ್ರಸಂಗವನ್ನೂ ಇದೇ ಸಂದರ್ಭದಲ್ಲಿ ಸ್ಮರಿಸಿದೆ.
ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಅಮೆರಿಕವು ಸೂಕ್ತ ದಾಖಲೆಗಳಿಲ್ಲದೆ ನೆಲೆಸಿದ್ದ 205 ಭಾರತೀಯರನ್ನು ಮಿಲಿಟರಿ ವಿಮಾನದಲ್ಲಿ ಕಳುಹಿಸಿದೆ. ಆದರೆ ಈ ರೀತಿ ಅವರನ್ನು ಕಳುಹಿಸಿಕೊಡುವಾಗ ನಡೆದುಕೊಂಡ ರೀತಿ ಕುರಿತು ಕಾಂಗ್ರೆಸ್ ಬೇಸರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕ್ರಿಮಿನಲ್ ಹಿನ್ನೆಲೆವುಳ್ಳವರು ಬಂಧನ ಕೇಂದ್ರಕ್ಕೆ ರವಾನೆ
ನವದೆಹಲಿ: ಪಂಜಾಬ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ 104 ಮಂದಿ ಅಕ್ರಮ ಭಾರತೀಯ ನಿವಾಸಿಗಳ ದಾಖಲೆಗಳನ್ನು ಕೂಲಂಕಷವಾಗಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅವರಲ್ಲಿ ಅಪರಾಧದ ಹಿನ್ನೆಲೆಯುಳ್ಳವರು ಇದ್ದರೆ ಅವರನ್ನು ಮುಂದಿನ ಕ್ರಮ ಕೈಗೊಳ್ಳಲು ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಿದ್ದಾರೆ ಎನ್ನಲಾಗಿದೆ.ಪಂಜಾಬ್ ಪೊಲೀಸರು ಮತ್ತು ಗುಪ್ತಚರ ದಳವು ಜಂಟಿಯಾಗಿ ಗಡೀಪಾರು ಗೊಂಡ ಎಲ್ಲರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದ ವಲಸಿಗರನ್ನು ತಕ್ಷಣವೇ ಮನೆಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕ್ರಿಮಿನಲ್ ಹಿನ್ನೆಲೆ ಇದ್ದವರನ್ನು ಮುಂದಿನ ವಿಚಾರಣೆಗಾಗಿ ಬಂಧನ ಕೇಂದ್ರಕ್ಕೆ ರವಾನಿಸಲು ನಿರ್ಧರಿಸಲಾಗಿದೆ.