ಸಾರಾಂಶ
ಮತಾಂತರಿ ಛಂಗುರ್ ಬಾಬಾ ಅರೆಸ್ಟ್:40 ಅಕೌಂಟ್‌ಗಳಲ್ಲಿತ್ತು ₹160 ಕೋಟಿ
ಮುಸ್ಲಿಂ ರಾಷ್ಟ್ರಗಳಿಂದ ಜಮಾಲ್ ಅಕೌಂಟ್‌ಗೆ ದುಡ್ಡು
ಲಖನೌ: ಮುಗ್ಧ ಜನರ ಮತಾಂತರಗೊಳಿಸುವ ಗ್ಯಾಂಗ್ ಒಂದರ ಮಾಸ್ಟರ್‌ಮೈಂಡ್ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನನ್ನು ಬಂಧಿಸಲಾಗಿದ್ದು, ಆತ ಅಕ್ರಮವಾಗಿ ಗಳಿಸಿದ್ದ ಅಪಾರ ಸಂಪತ್ತು ಮತ್ತು ಕಟ್ಟಿಸಿದ್ದ ಭವ್ಯ ಮಹಲಿನ ಅನಾವರಣವಾಗಿದೆ.
ಇತ್ತೀಚೆಗೆ ಉತ್ತರಪ್ರದೇಶದ ಬಲರಾಂಪುರದಲ್ಲಿ ಬಂಧಿಸಲ್ಪಟ್ಟ ಮತಾಂತರಿಗಳ ಜತೆ ನಂಟಿರುವ ಶಂಕೆಯಲ್ಲಿ ಜಮಾಲುದ್ದೀನ್ ಹಾಗೂ ಆತನ ಸಹಚರೆ ನಸ್ರೀನ್‌ಳನ್ನು ಹೋಟೆಲ್ ಒಂದರಲ್ಲಿ ಬಂಧಿಸಲಾಗಿತ್ತು. ಅವರೆಲ್ಲ ಬಡವರು, ದುರ್ಬಲ ವರ್ಗದವರು, ವಿಧವೆಯರಿಗೆ ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ, ಬೆದರಿಸಿ ಮತಾಂತರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್‌ಗೆ ಉಗ್ರ ನಂಟಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.ಜಮಾಲ್ ಸಾಮ್ರಾಜ್ಯ ಬೆಳಕಿಗೆ:ಒಂದೊಮ್ಮೆ ಸೈಕಲ್‌ನಲ್ಲಿ ಊರೂರು ಸುತ್ತಿ ಉಂಗುರ, ತಾಯತ ಮಾರುತ್ತಿದ್ದ ಜಮಾಲ್ ಬಳಿಕ ಹಳ್ಳಿಯ ಮುಖ್ಯಸ್ಥನಾದ. ಆತನ ಹೆಸರಲ್ಲಿ 40 ಬ್ಯಾಂಕ್ ಖಾತೆಗಳಿದ್ದು, ಅವುಗಳಿಗೆ ಮಧ್ಯಪ್ರಾಚ್ಯ ಮುಸ್ಲಿಂ ದೇಶಗಳಿಂದ 160 ಕೋಟಿ ರು. ಜಮೆಯಾಗಿರುವುದು ತಿಳಿದುಬಂದಿದೆ.
ಅತ್ತ ರೆಹ್ರಾ ಮಾಫಿಯ ಬಳಿಯ ದಗ್ರಾದ ಸಮೀಪದಲ್ಲಿ ಜಮಾಲ್ ಅಕ್ರಮವಾಗಿ ಮನೆಯೊಂದನ್ನು ನಿರ್ಮಿಸಿದ್ದ. ಇದರ ಒಂದು ಭಾಗದಲ್ಲಿ ಆತನ ಕುಟುಂಬ ವಾಸವಿದ್ದರೆ, ಇನ್ನೊಂದು ಭಾಗ ಯಾವ ಉದ್ದೇಶಕ್ಕೆ ಬಳಕೆಯಾಗಲಿದೆ ಎಂಬುದು ಸ್ಪಷ್ಟವಿಲ್ಲ. ಭದ್ರತೆಗಾಗಿ 2 ನಾಯಿಗಳನ್ನು ಸಾಕಿ, 15 ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಕಟ್ಟಡವನ್ನೀಗ ನೆಲಸಮ ಮಾಡಲಾಗಿದೆ. ಆತ ಇನ್ನೂ ಅನೇಕ ಕಡೆ ಆಸ್ತಿ ಮಾಡಿದ್ದ ಎನ್ನಲಾಗಿದೆ.