ಪಾಕ್‌ನಲ್ಲೂ ಆತ್ಮಾಹುತಿ ದಾಳಿ: 12 ಸಾವು

| Published : Nov 12 2025, 02:00 AM IST

ಸಾರಾಂಶ

ದೆಹಲಿಯಲ್ಲಿ ಸೋಮವಾರ ಕಾರು ಸ್ಫೋಟಗೊಂಡ ಮರುದಿನವೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಇದರಿಂದಾಗಿ 12 ಜನರು ಬಲಿಯಾಗಿದ್ದು, 20ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

- ಇಸ್ಲಾಮಾಬಾದ್‌ ಕೋರ್ಟ್‌ ಹೊರಗೆ ಆತ್ಮಹತ್ಯಾ ದಾಳಿ

- 27 ಜನರಿಗೆ ತೀವ್ರ ಗಾಯ

ಪಿಟಿಐ ಇಸ್ಲಾಮಾಬಾದ್‌

ದೆಹಲಿಯಲ್ಲಿ ಸೋಮವಾರ ಕಾರು ಸ್ಫೋಟಗೊಂಡ ಮರುದಿನವೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಇದರಿಂದಾಗಿ 12 ಜನರು ಬಲಿಯಾಗಿದ್ದು, 20ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮಂಗಳವಾರ ಎಲ್ಲವೂ ಎಂದಿನಂತೆ ಸಾಗುವಾಗ ಕೋರ್ಟ್‌ ಕಾಂಪ್ಲೆಕ್ಸ್‌ನ ಗೇಟ್‌ 11ರಲ್ಲಿ ಈ ಸ್ಫೋಟ ಸಂಭವಿಸಿದೆ. ಪರಿಣಾಮ ದಾಳಿಕೋರನ ರುಂಡ ಮುಂಡ ಬೇರೆ ಬೇರೆಯಾಗಿ ರಸ್ತೆ ಮೇಲೆ ಬಿದ್ದಿದೆ. ಮಿಕ್ಕಂತೆ ಮೃತಪಟ್ಟ 12 ಜನರನ್ನು ಪಿಂಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 20 ಜನರನ್ನು ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದುವರೆಗೂ ಯಾವುದೇ ಸಂಘಟನೆಗಳು ಸ್ಫೋಟದ ಹೊಣೆ ಹೊತ್ತಿಲ್ಲ. ಆದರೆ ಪಾಕ್ ಮತ್ತು ಅಫ್ಘಾನಿಸ್ತಾನದ ನಡುವೆ ಮಾತುಕತೆ ಮುರಿದುಬಿದ್ದ ಮರುದಿನವೇ ಇಸ್ಲಾಮಾಬಾದ್‌ನಲ್ಲಿ ಸ್ಫೋಟ ಸಂಭವಿಸಿದೆ. ಸಾಮಾನ್ಯವಾಗಿ ಇಂಥ ದಾಳಿಗಳನ್ನು ತೆಹ್ರೀಕ್-ಎ-ತಾಲಿಬಾನ್‌ ಪಾಕಿಸ್ತಾನ್ ಸಂಘಟನೆ ನಡೆಸುತ್ತದೆ.

---

ಭಾರತ ಹೊಣೆ: ಪಾಕ್‌ ಪ್ರಧಾನಿ

ಇಸ್ಲಾಮಾಬಾದ್‌: ಇಲ್ಲಿನ ಆತ್ಮಾಹುತಿ ದಾಳಿಗೆ ಭಾರತವೇ ಹೊಣೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ ಗಂಭೀರ ಆರೋಪ ಮಾಡಿದ್ದಾರೆ. ಭಾರತದ ಆಜ್ಞೆಯಂತೆ ಆಫ್ಘಾನ್‌ನ ತಾಲಿಬಾನ್‌ ನಡೆದುಕೊಂಡು ದಾಳಿ ನಡೆಸಿದೆ. ಜೊತೆಗೆ ಸೋಮವಾರ ಆಫ್ಘನ್‌ ಗಡಿಯಲ್ಲಿ ನಡೆದ ದಾಳಿಗೂ ಭಾರತವೇ ಕಾರಣ. ನವದೆಹಲಿಯು ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂದು ದೂಷಿಸಿದರು.