ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ : 12 ನಕ್ಸಲರು ಬಲಿ

| Published : Jul 18 2024, 01:37 AM IST / Updated: Jul 18 2024, 05:11 AM IST

ಸಾರಾಂಶ

ನಕ್ಸಲರ ಪ್ರಮುಖ ಕಾರ್ಯಸ್ಥಾನವಾದ ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿಕ ಚಕಮಕಿ ವೇಳೆ 12 ನಕ್ಸಲರು ಹತರಾಗಿದ್ದಾರೆ.

ಗಡ್‌ಚಿರೋಲಿ: ನಕ್ಸಲರ ಪ್ರಮುಖ ಕಾರ್ಯಸ್ಥಾನವಾದ ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ 12 ನಕ್ಸಲರು ಹತರಾಗಿದ್ದಾರೆ. 

ಇದು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಜಯವಾಗಿದೆ. ವಂಡೋಲಿ ಗ್ರಾಮದ ಅರಣ್ಯದಲ್ಲಿ ಬುಧವಾರ ಮಹಾರಾಷ್ಟ್ರ ಪೊಲೀಸರು ಮತ್ತು ಸಿ60 ಕಮಾಂಡೋಗಳನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸುವಾಗ ನಕ್ಸಲರ ತಂಡ ಎದುರಾಗಿತ್ತು. ಈ ವೇಳೆ ಉಭಯ ಗುಂಪುಗಳ ನಡುವೆ ಸತತ 6 ತಾಸುಗಳ ಕಾಲ ಗುಂಡಿನ ದಾಳಿ ನಡೆಸಿದೆ. 

ಸಂಜೆ ವೇಳೆಗೆ ಗುಂಡಿನ ದಾಳಿ ನಿಂತ ಬಳಿಕ ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 12 ನಕ್ಸಲರ ಶವ ಪತ್ತೆಯಾಗಿದೆ ಎಂದು ಗಡ್‌ಚಿರೋಲಿ ಪೊಲೀಸ್‌ ಅಧೀಕ್ಷಕ ನೀಲೋತ್ಪಲ್‌ ತಿಳಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ಗಾಯಗೊಂಡಿದ್ಧಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗುಂಡಿಕ ಚಕಮಕಿ ನಡೆದ ಸ್ಥಳದಿಂದ ನಕ್ಸಲರು ಬಳಸುತ್ತಿದ್ದ 3 ಎಕೆ 47 ಗನ್‌, 2 ಇನ್ಸಾಸ್‌ ರೈಫಲ್ಸ್‌, ಒಂದು ಎಸ್‌ಎಲ್‌ಆರ್‌ ಗನ್‌ ವಶಪಡಿಸಿಕೊಳ್ಳಲಾಗಿದೆ.ನಕ್ಸಲರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿ60 ಕಮಾಂಡೋ ತಂಡಕ್ಕೆ ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ 51 ಲಕ್ಷ ರು. ನಗದು ಬಹುಮಾನ ಘೋಷಿಸಿದ್ದಾರೆ.