ಸಾರಾಂಶ
ರಾಷ್ಟ್ರದ 12 ರಾಜ್ಯಗಳಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಿರುವ ಮತದಾರರ ಪೈಕಿ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ 948ಕ್ಕೇರಿದ್ದು (ಪ್ರತಿ ಸಾವಿರಕ್ಕೆ) ಈ ಬಾರಿ 18-19 ವಯಸ್ಸಿನ 85.3 ಲಕ್ಷ ಹೊಸ ಮಹಿಳಾ ಮತದಾರರು ತಮ್ಮ ಹೆಸರನ್ನು ಮತಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ.
ಇದರೊಂದಿಗೆ ಒಟ್ಟು ಮಹಿಳಾ ಮತದಾರರ ಸಂಖ್ಯೆ 49.72 ಕೋಟಿಗೆ ಏರಿಕೆಯಾಗಿದೆ. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ಮುಖ್ಯ ಚುನಾವಣಾ ಅಯುಕ್ತರು ಮಾಹಿತಿ ನೀಡಿದ್ದಾರೆ.