- ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹೇಮಂತ್‌

- 12 ವರ್ಷಗಳಲ್ಲಿ 12 ಹೆಸರು ಬದಲಿಸಿಕೊಂಡಿದ್ದ ಕ್ರಿಮಿನಲ್‌

- ಹತ್ತಾರು ಸಿನೆಮಾ, 3000 ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ

ನವದೆಹಲಿ: ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಪರೋಲ್‌ ಪಡೆದು ಬಿಡುಗಡೆ ಬಳಿಕ ಪರಾರಿಯಾಗಿ ನಂತರ 12 ವರ್ಷದ ಅವಧಿಯಲ್ಲಿ 3000 ವೇದಿಕೆ ಕಾರ್ಯಕ್ರಮ ಮಾತ್ರವಲ್ಲದೇ, ಖ್ಯಾತ ನಟರಾದ ಅಮಿತಾಭ್‌ ಬಚ್ಚನ್‌, ಮೋಹನ್‌ಲಾಲ್‌ ಅವರ ಚಿತ್ರಗಳಲ್ಲೂ ನಟಿಸಿದ್ದ ರೋಚಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೀಗೆ ತೆರೆಯ ಹಿಂದೆ ನಾನಾ ಆಟವಾಡಿದ್ದ ಹೇಮಂತ್‌ ಮೋದಿ ಎಂಬಾತನನ್ನು ಪೊಲೀಸರು 12 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್‌ನ ಹೇಮಂತ್‌ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿ 2014ರಲ್ಲಿ 30 ದಿನ ಪರೋಲ್‌ ಪಡೆದಿದ್ದ. ಆ ಬಳಿಕ ಹಿಂದಿರುಗಿರಲಿಲ್ಲ. ಪೊಲೀಸರು ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.


ನಾನಾ ನಾಮ, ಚಿತ್ರಗಳಲ್ಲಿ ನಟನೆ

ಜೈಲಿನಿಂದ ಪರಾರಿಯಾಗಿದ್ದ 12 ವರ್ಷಗಳಲ್ಲಿ 12 ಹೆಸರು ಬದಲಿಸಿಕೊಂಡಿದ್ದ. ಹೇಮಂತ್ ನಗಿಂದಾಸ್ ಪುರುಷೋತ್ತಮದಾಸ್ ಮೋದಿ ಎಂದಿದ್ದ ಈತ ಸ್ಪಂದನ್‌ ಮೋದಿ, ಸ್ಪಂದನ್‌ ವ್ಯಾಸ್‌, ಸ್ಪಂದನ್‌ ಜೋಶಿ, ಸ್ಪಂದನ್‌ ಕುಮಾರ್‌, ಹೇಮಾಂಗ್ ವ್ಯಾಸ್‌ ಹೀಗೆ ಹಲವು ಹೆಸರುಗಳನ್ನು ಕಾಣಿಸಿಕೊಂಡಿದ್ದನು. ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನು ಬದಲಿಸಿಕೊಂಡು ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಪಡೆದಿದ್ದನು. ಅಲ್ಲದೇ ಅನುಕೂಲಕ್ಕೆ ತಕ್ಕಂತೆ ತನ್ನ ಜಾತಿಯನ್ನೂ ಬದಲಿಸಿಕೊಂಡಿದ್ದನು.

ಆತ ಥಗ್ಸ್‌ ಆಫ್‌ ಹಿಂದೂಸ್ಥಾನ್‌, ಜಯೇಶ್‌ಭಾಯ್‌ ಜೋರ್ಧಾರ್‌, ಎಲ್‌- 2 ಎಂಪುರಾನ್‌ನಂತಹ ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದನು. ಒಟ್ಟಾರೆ ಹಿಂದಿಯಲ್ಲಿ 6, ಮಲಯಾಳಂ 1, ಗುಜರಾತಿಯಲ್ಲಿ 10 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದನು. ಮಾತ್ರವಲ್ಲದೇ ಟೀವಿ ಧಾರವಾಹಿ, ನಾಟಕ, ಕಿರುಚಿತ್ರ, ವೆಬ್‌ ಸಿರೀಸ್‌ , 3000 ಕ್ಕೂ ಹೆಚ್ಚು ವೇದಿಕಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದನು. ಅಮಿತಾಭ್ ಬಚ್ಚನ್‌, ಅಮೀರ್ ಖಾನ್‌, ರಣ್‌ವೀರ್‌ ಸಿಂಗ್‌, ಮೋಹನ್‌ ಲಾಲ್‌ ಸೇರಿದಂತೆ ಖ್ಯಾತನಾಮರ ಜತೆ ನಟಿಸಿ, ಸಿಕ್ಕಿ ಬೀಳದಂತೆ ದಿನ ಕಳೆಯುತ್ತಿದ್ದನು.

ಆದರೆ ಆತನ ಕೈ ಮೇಲಿದ್ದ ಹಚ್ಚೆ ಪೊಲೀಸರಿಗೆ ಬಂಧಿಸುವಲ್ಲಿ ಸಾಕ್ಷಿಯಾಗಿತ್ತು ಎಂದು ತಿಳಿದು ಬಂದಿದೆ.