ಸಾರಾಂಶ
ಟರ್ಕಿ ವಿರುದ್ಧ ಬಾಯ್ಕಾಟ್ ಅಭಿಯಾನದ ಭಾಗವಾಗಿ ದೇಶಾದ್ಯಂತ 125ಕ್ಕೂ ಹೆಚ್ಚು ಉನ್ನತ ವ್ಯಾಪಾರಿಗಳು ಟರ್ಕಿ ಮತ್ತು ಅಜರ್‌ಬೈಜಾನ್‌ನೊಂದಿಗಿನ ಪ್ರಯಾಣ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ, ವಾಣಿಜ್ಯ ಒಪ್ಪಂದಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ನವದೆಹಲಿ: ಭಾರತ-ಪಾಕ್ ಸಂಘರ್ಷದ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ವಿರುದ್ಧ ಬಾಯ್ಕಾಟ್ ಅಭಿಯಾನದ ಭಾಗವಾಗಿ ದೇಶಾದ್ಯಂತ 125ಕ್ಕೂ ಹೆಚ್ಚು ಉನ್ನತ ವ್ಯಾಪಾರಿಗಳು ಟರ್ಕಿ ಮತ್ತು ಅಜರ್‌ಬೈಜಾನ್‌ನೊಂದಿಗಿನ ಪ್ರಯಾಣ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ, ವಾಣಿಜ್ಯ ಒಪ್ಪಂದಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
24 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಆಯೋಜಿಸಿದ್ದ ವ್ಯಾಪಾರಸ್ಥರ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ಜತೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲುವುದು ಹಾಗೂ ಭಾರತವಿರೋಧಿಗಳನ್ನು ದೃಢವಾಗಿ ವಿರೋಧಿಸುವ ನಿರ್ಣಯವನ್ನು ಸಿಎಐಟಿ ಅಂಗೀಕರಿಸಿದೆ.
ಟರ್ಕಿ ಅಥವಾ ಅಜರ್‌ಬೈಜಾನ್‌ನಲ್ಲಿ ಯಾವುದೇ ಚಿತ್ರದ ಚಿತ್ರೀಕರಣ ನಡೆಸದಂತೆ ಭಾರತೀಯ ಚಲನಚಿತ್ರೋದ್ಯಮಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಸಿಎಐಟಿ ಮನವಿ ಮಾಡಿದ್ದು, ಈಗಾಗಲೇ ಯಾವುದೇ ಚಿತ್ರೀಕರಣ ನಡೆದಿದ್ದರೆ, ಅಂತಹ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ. ಈಗಾಗಲೇ ವ್ಯಾಪಾರಸ್ಥರು ಟರ್ಕಿ ಸೇಬುವನ್ನು ಬಾಯ್ಕಾಟ್ ಮಾಡಿದ್ದಾರೆ.
ವಿವಿಧ ಸಂಘಟನೆಗಳಿಂದ ಬಾಯ್ಕಾಟ್ ಕರೆ:ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್ ಸೇರಿದಂತೆ ಎಲ್ಲ ಪ್ಲಾಟ್‌ಫಾರ್ಮ್‌ಗಳು ಟರ್ಕಿ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ಡಬ್ಲುಐಸಿಇ) ಒತ್ತಾಯಿಸಿದೆ. ಇನ್ನೊಂದೆಡೆ ಎರಡೂ ದೇಶಗಳ ಜೊತೆಗಿನ ಎಲ್ಲಾ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಉದ್ಯಮಿಗಳಿಗೆ ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (ಜಿಜೆಸಿ) ಒತ್ತಾಯಿಸಿದೆ. ಇನ್ನು, ಉತ್ತರ ಪ್ರದೇಶದ ಛತ್ರಪತಿ ಶಾಹುಜಿ ಮಹಾರಾಜ್ ವಿವಿ ಹಾಗೂ ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿವಿಗಳು ಟರ್ಕಿ ವಿವಿಗಳ ಜತೆಗಿನ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ತಕ್ಷಣವೇ ರದ್ದುಗೊಳಿಸುವುದಾಗಿ ಘೋಷಿಸಿವೆ.