ಸಾರಾಂಶ
17 ವರ್ಷಗಳ ಹಿಂದೆ ನಡೆದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಒಂದೇ ಕುಟುಂಬದ 14 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಬರೇಲಿ: 17 ವರ್ಷಗಳ ಹಿಂದೆ ನಡೆದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಒಂದೇ ಕುಟುಂಬದ 14 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 6 ಜನರಿಗೆ ತಲಾ 50 ಸಾವಿರ ರು., ಉಳಿದ 8 ಮಂದಿಗೆ ತಲಾ 30 ಸಾವಿರ ರು. ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ: 2007ರಲ್ಲಿ ಉತ್ತರ ಪ್ರದೇಶದ ಬದೌನ್ ಸಮೀಪ ಹಳ್ಳಿಯೊಂದರಲ್ಲಿ ಹರ್ಪಾಲ್ ಸಿಂಗ್ ಎಂಬುವರ ಮಗ ನರೇಶ್, ನೆರೆಮನೆಯ ರಾಧೇ ಶ್ಯಾಂ ಎನ್ನುವವರನ್ನು ಕೊಲೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ರಾಧೇ ಶ್ಯಾಂ ಅವರ ಕುಟುಂಬದ 16 ಜನರು ನರೇಶ್ ಮನೆಗೆ ದಾಳಿ ನಡೆಸಿ, ಮನೆಯಲ್ಲಿದ್ದ ಚಿನ್ನಬೆಳ್ಳಿ ಆಭರಣ, ಹಣ, ಗೋವುಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು. ಜೊತೆಗೆ ನರೇಶ್ ಸೋದರ ಪಾನ್ ಸಿಂಗ್‌ರನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದರಿಂದ ಇಡೀ ಹಳ್ಳಿಯೇ ನಿಬ್ಬೆರಗಾಗಿತ್ತು. ಇದರ ವಿಚಾರಣೆ ವೇಳೆಯೇ ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದರು.ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನ್ಯಾಯಾಲಯ ಉಳಿದ ಎಲ್ಲಾ 14 ಜನರಿಗೂ ಜೀವಾವಧಿ ಶಿಕ್ಷೆ ಘೋಷಿಸಿ, ದಂಡ ಹಾಕಿದೆ.