ಮಿಗತೆ ಬಜೆಟ್‌ : ದೇಶದಲ್ಲೇ ಕರ್ನಾಟಕ ನಂ.5

| N/A | Published : Sep 23 2025, 01:07 AM IST

ಸಾರಾಂಶ

2022-23ರ ಆರ್ಥಿಕ ವರ್ಷದಲ್ಲಿ ಭಾರತದ ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತ್ಯಧಿಕ ‘ಹೆಚ್ಚುವರಿ ಆದಾಯ’ (ಮಿಗತೆ ಬಜೆಟ್) ದಾಖಲಿಸಿದ್ದು, ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ. ಕರ್ನಾಟಕ ಇದೇ ಸಾಲಲ್ಲಿ 5ನೇ ಸ್ಥಾನ ಪಡೆದಿದೆ.

 ನವದೆಹಲಿ: 2022-23ರ ಆರ್ಥಿಕ ವರ್ಷದಲ್ಲಿ ಭಾರತದ ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತ್ಯಧಿಕ ‘ಹೆಚ್ಚುವರಿ ಆದಾಯ’ (ಮಿಗತೆ ಬಜೆಟ್) ದಾಖಲಿಸಿದ್ದು, ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ. ಕರ್ನಾಟಕ ಇದೇ ಸಾಲಲ್ಲಿ 5ನೇ ಸ್ಥಾನ ಪಡೆದಿದೆ.

ರಾಜ್ಯಗಳ ಆದಾಯ-ಖರ್ಚು ಕುರಿತು ಮಹಾಲೇಖಪಾಲರು (ಸಿಎಜಿ) ಇದೇ ಮೊದಲ ಬಾರಿ ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಈ ಸಂಗತಿ ಇದೆ.

ಖರ್ಚಿಗಿಂತ ಆದಾಯ ಹೆಚ್ಚಿರುವ ರಾಜ್ಯಗಳನ್ನು ‘ಮಿಗತೆ ಬಜೆಟ್’ ಎಂದು ಗುರುತಿಸಲಾಗುತ್ತದೆ.

ಇದರ ಪೈಕಿ, ಒಂದು ಕಾಲದಲ್ಲಿ ಬೀಮಾರು ರಾಜ್ಯ ಎಂದು ಅಪಖ್ಯಾತಿ ಪಡೆದಿದ್ದ ಉತ್ತರ ಪ್ರದೇಶ 37,263 ಕೋಟಿ ರು. ಮಿಗತೆ ಬಜೆಟ್‌ ದಾಖಲಿಸಿದೆ. ಕರ್ನಾಟಕ 13,496 ಕೋಟಿ ರು. ಹೆಚ್ಚುವರಿ ಆದಾಯವನ್ನು ಆ ಸಾಲಲ್ಲಿ ದಾಖಲಿಸಿದೆ ಎಂದು ವರದಿ ಹೇಳಿದೆ.

ಟಾಪ್‌ 10 ರಾಜ್ಯಗಳು:

ಒಟ್ಟಾರೆ ಉತ್ತರ ಪ್ರದೇಶ (37,263 ಕೋಟಿ ರು.), ಗುಜರಾತ್ (19,865 ಕೋಟಿ ರು.), ಒಡಿಶಾ (19,456 ಕೋಟಿ ರು.), ಜಾರ್ಖಂಡ್ (13,564 ಕೋಟಿ ರು.), ಕರ್ನಾಟಕ (13,496 ಕೋಟಿ ರು.) ಮಿಗತೆ ಬಜೆಟ್‌ನ ಟಾಪ್-5 ರಾಜ್ಯಗಳಾಗಿವೆ.

ನಂತರದ ಸ್ಥಾನದಲ್ಲಿ ಛತ್ತೀಸ್‌ಗಢ (8,592 ಕೋಟಿ ರು.), ತೆಲಂಗಾಣ (5,944 ಕೋಟಿ ರು.), ಉತ್ತರಾಖಂಡ (5,310 ಕೋಟಿ ರು.), ಮಧ್ಯಪ್ರದೇಶ (4,091 ಕೋಟಿ ರು.) ಮತ್ತು ಗೋವಾ (2,399 ಕೋಟಿ ರು.) 6ರಿಂದ 10ನೇ ಸ್ಥಾನದಲ್ಲಿವೆ.

ಒಟ್ಟಾರೆ 16 ರಾಜ್ಯಗಳು ಮಿಗತೆ ಬಜೆಟ್‌ ಹೊಂದಿರುವ ರಾಜ್ಯಗಳಾಗಿದ್ದು, ಇವುಗಳಲ್ಲಿ 6 ಈಶಾನ್ಯ ರಾಜ್ಯಗಳು 11ರಿಂದ 16ನೇ ಸ್ಥಾನದಲ್ಲಿವೆ.

ಇಲ್ಲಿ ಕೊರತೆ ಬಜೆಟ್:

ಆದಾಯಕ್ಕಿಂತ ಖರ್ಚು ಜಾಸ್ತಿ ಇರುವ 12 ರಾಜ್ಯಗಳನ್ನೂ ಸಿಎಜಿ ಪಟ್ಟಿ ಮಾಡಿದೆ. ಇವುಗಳಲ್ಲಿ ಆಂಧ್ರಪ್ರದೇಶ (-43,488 ಕೋಟಿ ರು.), ತಮಿಳುನಾಡು (-36,215 ಕೋಟಿ ರು.), ರಾಜಸ್ಥಾನ (-31,491 ಕೋಟಿ ರು.), ಪ. ಬಂಗಾಳ (- 27,295 ಕೋಟಿ ರು.), ಕೇರಳ (9,226 ಕೋಟಿ ರು.), ಮಹಾರಾಷ್ಟ್ರ (1,936 ಕೋಟಿ ರು.) ಸೇರಿ ಹಲವು ರಾಜ್ಯಗಳಿವೆ.

ತರಿಗೆ ಮೂಲ ಹೆಚ್ಚಳದಲ್ಲೂ ಕರ್ನಾಟಕ ನಂ.5:

ತೆರಿಗೆ ಮತ್ತು ತೆರಿಗೆಯೇತರ ಎರಡೂ ಆದಾಯ ಮೂಲಗಳನ್ನು ಹೆಚ್ಚಿಸಿಕೊಂಡಿರುವ ರಾಜ್ಯಗಳಲ್ಲಿ ಹರ್ಯಾಣ ನಂ.1 ಸ್ಥಾನದಲ್ಲಿದ್ದರೆ, ಕರ್ನಾಟಕ ಇದರಲ್ಲೂ 5ನೇ ಸ್ಥಾನ ಪಡೆದಿದೆ.

ಹರ್ಯಾಣವು ರಾಜ್ಯದ ಒಟ್ಟು ಆದಾಯದ ಪೈಕಿ, ಶೇ.80ಕ್ಕಿಂತ ಹೆಚ್ಚು ಆದಾಯವನ್ನು ಸ್ವಂತ ತೆರಿಗೆ ಮತ್ತು ತೆರಿಗೆಯೇತರ ಆದಾಯದಿಂದ ಸಂಗ್ರಹಿಸುತ್ತದೆ. ಕರ್ನಾಟಕ ತನ್ನ ಆದಾಯದಲ್ಲಿ ಶೇ.69 ಪಾಲನ್ನು ತೆರಿಗೆ ಹಾಗೂ ತೆರಿಗೆಯೇತರ ಮೂಲದಿಂದ ಪಡೆಯುತ್ತದೆ.

ಇದರಲ್ಲಿ ಹರ್ಯಾಣ ಶೇ.80, ತೆಲಂಗಾಣ ಶೇ.79, ಮಹಾರಾಷ್ಟ್ರ ಶೇ.73, ಗುಜರಾತ್ ಶೇ.72, ಕರ್ನಾಟಕ ಶೇ.69 ಟಾಪ್‌-5 ರಾಜ್ಯಗಳಾಗಿವೆ.

Read more Articles on