ಸಾರಾಂಶ
ಹಲವಾರು ವರ್ಷಗಳ ಹಿಂದೆ ಲಕ್ಷಗಟ್ಟಲೆ ಖರ್ಚು ಮಾಡಿ ಜೀರಗೇರಿಯ ಸಮೀಪ ನಿರ್ಮಿತ ೧೦ ಮಳಿಗೆಗಳಿಂದ ಯಾವುದೇ ಆದಾಯವಾಗುತ್ತಿಲ್ಲ. ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿರುವ ಇಲ್ಲಿ ನಮ್ಮ ಅಧಿಕಾರಿಗಳು ಗಮನ ನೀಡಿದಲ್ಲಿ ಮಾಸಿಕ ಲಕ್ಷಾಂತರ ಆದಾಯ ಪಡೆಯಲು ಸಾಧ್ಯ. ಮುಂದೆಯೂ ಇದೇ ಚಾಳಿ ಅಧಿಕಾರಿಗಳು ಮುಂದುವರೆಸಿದರೆ ಡಾ.ಬಾಬಾಸಾಹೇಬ ಫೋಟೋದೊಡನೆ ಪುರಸಭೆ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸದಸ್ಯ ಸಚೀನ್ ಕೊಡತೆ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಹಲವಾರು ವರ್ಷಗಳ ಹಿಂದೆ ಲಕ್ಷಗಟ್ಟಲೆ ಖರ್ಚು ಮಾಡಿ ಜೀರಗೇರಿಯ ಸಮೀಪ ನಿರ್ಮಿತ ೧೦ ಮಳಿಗೆಗಳಿಂದ ಯಾವುದೇ ಆದಾಯವಾಗುತ್ತಿಲ್ಲ. ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿರುವ ಇಲ್ಲಿ ನಮ್ಮ ಅಧಿಕಾರಿಗಳು ಗಮನ ನೀಡಿದಲ್ಲಿ ಮಾಸಿಕ ಲಕ್ಷಾಂತರ ಆದಾಯ ಪಡೆಯಲು ಸಾಧ್ಯ. ಮುಂದೆಯೂ ಇದೇ ಚಾಳಿ ಅಧಿಕಾರಿಗಳು ಮುಂದುವರೆಸಿದರೆ ಡಾ.ಬಾಬಾಸಾಹೇಬ ಫೋಟೋದೊಡನೆ ಪುರಸಭೆ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸದಸ್ಯ ಸಚೀನ್ ಕೊಡತೆ ಎಚ್ಚರಿಸಿದರು.ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪುರಸಭೆಗೆ ಇಚ್ಛಾಶಕ್ತಿಯ ಕೊರತೆಯಿದೆ. ಖಾಲಿ ಜಾಗಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ಆದಾಯ ಪಡೆಯಬಹುದು. ಬಸ್ ನಿಲ್ದಾಣದ ಬಳಿ ನಿರ್ಮಿತ ಉದ್ಯಾನ ನಿರ್ವಹಣೆ ಅಸಮರ್ಪಕವಾಗಿದ್ದು, ಅಲ್ಲಿಯೂ ವಾಣಿಜ್ಯ ಮಳಿಗೆ ನಿರ್ಮಿಸಿದಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆಂದರು.
ಸದಸ್ಯ ಸಂತೋಷ ಜಮಖಂಡಿ ಮಾತನಾಡಿ, ಈ ಹಿಂದೆ ಪಟ್ಟಣದಲ್ಲಿ ಹಲವಾರು ಕಾಮಗಾರಿಗಳಾಗಿದ್ದು, ಅವುಗಳು ಗುಣಮಟ್ಟದಿಂದ ಕೂಡಿಲ್ಲ. ಹೀಗಿದ್ದರೂ ಅಧಿಕಾರಿಗಳೂ ಅದೇ ಗುತ್ತಿಗೆದಾರನಿಗೆ ಮತ್ತೆ ಕಾಮಗಾರಿ ನೀಡುತ್ತಿದ್ದಾರೆ, ನದಿ ತುಂಬಿ ಹರಿಯುತ್ತಿದ್ದರೂ ಪಟ್ಟಣದಲ್ಲಿ ೯ ದಿನಕ್ಕೊಮ್ಮೆ ಕುಡಿಯುವ ನೀರು ಪರೈಕೆಯಾಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೆ.ಇ. ಭಾಗ್ಯಶ್ರೀ ಪಾಟೀಲ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಪಟ್ಟಣದಲ್ಲಿ ಹಲವಾರು ಕಡೆಗಳಲ್ಲಿ ಬೋರವೆಲ್ ನೀರಿನ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ೨೪ ತಾಸು ಅವುಗಳಿಂದಲೇ ನೀರು ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯ ನೀರಿನ ಸಮಸ್ಯೆ ಇಲ್ಲ ಎಂದಾಗ, ಸದಸ್ಯ ಕಾಶಿನಾಥ ರಾಠೋಡ ಅವರು ಕೆಲವೊಂದು ಬೋರವೆಲ್ ನೀರು ಗಡಸು ನೀರಾಗಿದ್ದು, ಅವುಗಳು ಉಪಯೋಗಕ್ಕೆ ಬಾರದಂತಾಗಿದೆ. ಕಾರಣ ನದಿನೀರನ್ನೇ ಪಟ್ಟಣದ ತುಂಬಾ ಸರಬರಾಜು ಮಾಡಲು ನಿಮಗೇನು ತೊಂದರೆ ಎಂದರು. ಈ ನಡುವೆ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಿಸುವ ಕುರಿತು ಅರ್ಜಿ ಬಂದಿದ್ದರ ಕುರಿತು ಸದಸ್ಯರ ಗಮನಕ್ಕೆ ತಂದಾಗ ಇದನ್ನು ಸರ್ವ ಸದಸ್ಯರು ಸಮ್ಮತಿಸಿದರು. ಪಟ್ಟಣಕ್ಕೆ ನೀರು ಸರಬರಾಜು ಜಾಕವೆಲ್‌ದಲ್ಲಿದ್ದ ನೀರೆತ್ತುವ ಪಂಪಗಳ ಸಾಮರ್ಥ್ಯ ಕಡಿಮೆಯಾಗಿದ್ದು, ಕಾರಣ ಹೊಸ ಮೋಟರ್ ಖರೀದಿಸುವ ಕುರಿತು ಚರ್ಚಿಸಲಾಯಿತು. ವ್ಯವಸ್ಥಾಪಕ ಮಲ್ಲಿಕಾರ್ಜುನ ಪಾಟೀಲ ಹಿಂದಿನ ನಡಾವಳಿಗಳನ್ನು ಓದಿದರು. ೨೦೨೫ ರ ಏಪ್ರಿಲ್ ದಿಂದ ಅಗಸ್ಟ ೨೫ ರ ಜಮಾ-ಖರ್ಚು ಅನುಮೋದನೆ ನೀಡಲಾಯಿತು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ನಸ್ರಿನ್‌ಬಾನ ನಗಾರ್ಜಿ, ಮುಖ್ಯಾಧಿಕಾರಿ ಎಫ್.ಬಿ.ಗಿಡ್ಡಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಇರ್ಫಾನ್ ಪಠಾಣ, ಸ್ಥಾಯಿ ಸಮೀತಿ ಚೇರಮನ್ ಕುಮಾರ ಸರಿಕರ ಇದ್ದರು. ಸಭೆಯಲ್ಲಿ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.