ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮೇಲೆ 17.02 ಗಂಟೆ ಚರ್ಚೆ : ರಾಜ್ಯಸಭೆ ದಾಖಲೆ

| N/A | Published : Apr 07 2025, 12:33 AM IST / Updated: Apr 07 2025, 05:20 AM IST

ಸಾರಾಂಶ

ಕಳೆದ ವಾರ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮೇಲೆ ನಡೆದ ಚರ್ಚೆ ದಾಖಲೆ ಸ್ಥಾಪಿಸಿದೆ. ಇದು ಮೇಲ್ಮನೆಯ ಇತಿಹಾಸದಲ್ಲಿ ಒಂದು ವಿಷಯದ ಮೇಲೆ ಅತಿ ಹೆಚ್ಚು ಕಾಲ ಚರ್ಚೆ ಎಂಬ ದಾಖಲೆ ಬರೆದಿದೆ.

 ನವದೆಹಲಿ: ಕಳೆದ ವಾರ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮೇಲೆ ನಡೆದ ಚರ್ಚೆ ದಾಖಲೆ ಸ್ಥಾಪಿಸಿದೆ. ಇದು ಮೇಲ್ಮನೆಯ ಇತಿಹಾಸದಲ್ಲಿ ಒಂದು ವಿಷಯದ ಮೇಲೆ ಅತಿ ಹೆಚ್ಚು ಕಾಲ ಚರ್ಚೆ ಎಂಬ ದಾಖಲೆ ಬರೆದಿದೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಸಂಸದೀಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು 17 ಗಂಟೆ 2 ನಿಮಿಷಗಳ ಚರ್ಚೆ ನಡೆದಿದೆ. ಇದು 1981ರಲ್ಲಿ ಎಸ್ಮಾ ಮಸೂದೆ ಮೇಲೆ ನಡೆದಿದ್ದ ಚರ್ಚೆಯ ದಾಖಲೆಯನ್ನು (16 ಗಂಟೆ 55 ನಿಮಿಷಗಳು) ಮುರಿದಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಬಜೆಟ್ ಅಧಿವೇಶನದ ಕೊನೆಯ ದಿನವಾದ ಏ.3 ರಂದು, ರಾಜ್ಯಸಭೆಯು ಸದನದ ಇತಿಹಾಸದಲ್ಲಿ ತನ್ನ ಅತಿ ದೀರ್ಘಾವಧಿಯ ಕಲಾಪಕ್ಕೆ ಸಾಕ್ಷಿಯಾಯಿತು, ಇದು ಗುರುವಾರ ಬೆಳಿಗ್ಗೆ 11:00 ರಿಂದ ಮರುದಿನ ಬೆಳಿಗ್ಗೆ 4:02 ರವರೆಗೆ ನಡೆಯಿತು.

ಒಟ್ಟಾರೆಯಾಗಿ, ರಾಜ್ಯಸಭೆಯು ಬಜೆಟ್ ಅಧಿವೇಶನದಲ್ಲಿ ಒಟ್ಟು 159 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು, ಉತ್ಪಾದಕತೆಯು ಶೇ.119ರಷ್ಟಿದೆ.

ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಇನ್ನೊಂದು ದಾವೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಕ್ಫ್‌ ತಿದ್ದುಪಡಿ ವಿಧೇಯಕದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಈ ತಿದ್ದುಪಡಿ ವಿಧೇಯಕವು ನಿರ್ದಿಷ್ಟ ಧಾರ್ಮಿಕ ವ್ಯವಹಾರಗಳ ವಿಚಾರದಲ್ಲಿ ಲಜ್ಜಾಹೀನ ಮಧ್ಯಪ್ರವೇಶವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೇರಳದ ಸುನ್ನಿ ಮುಸ್ಲಿಂ ವಿದ್ವಾಂಸರು ಮತ್ತು ಧರ್ಮಗುರುಗಳ ಸಮಸ್ತ ಕೇರಳ ಜಮಿಯಾತುಲ್‌ ಉಲೇಮಾದಿಂದ ಮತ್ತೊಂದು ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದೆ.ವಕ್ಫ್‌ ತಿದ್ದುಪಡಿ ಕಾಯ್ದೆಯು ವಕ್ಫ್‌ ಮತ್ತು ವಕ್ಫ್‌ ಬೋರ್ಡ್‌ನ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹಾನಿ ಮಾಡುತ್ತದೆ. ಇದು ಸಂವಿಧಾನದ ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿದೆ. ವಕ್ಫ್‌ ಬೋರ್ಡ್‌ ಮತ್ತು ರಾಜ್ಯ ಸರ್ಕಾರದಿಂದ ಅಧಿಕಾರಗಳನ್ನು ಕಿತ್ತುಕೊಂಡು ಕೇಂದ್ರ ಸರ್ಕಾರಕ ಕೈಗೆ ನೀಡುತ್ತದೆ ಎಂದು ಎಂದು ವಕೀಲ ವಕೀಲ ಜುಲ್ಫೀಕರ್‌ ಅಲಿ ಪಿ.ಎಸ್‌. ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಜಾವೇದ್‌, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಮತ್ತು ಆಪ್‌ ಶಾಸಕ ಅಮಾನತುಲ್ಲಾ ಖಾನ್‌, ಮತ್ತಿತರರು ಈಗಾಗಲೇ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.--

ರಾಷ್ಟ್ರವ್ಯಾಪಿ ಪ್ರತಿಭಟನೆ- ಮುಸ್ಲಿಂ ಮಂಡಳಿವಕ್ಫ್‌ ಮಸೂದೆ ರದ್ದಾಗುವವರೆಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಘೋಷಿಸಿದೆ.

ವಕ್ಫ್‌ ಮಂಡಳಿ ಮೇಲೆ ಕೇಂದ್ರ ನಿಯಂತ್ರಣ ಹೇರಲ್ಲ: ನಡ್ಡಾ

 ನವದೆಹಲಿ: ‘ಕೇಂದ್ರ ಸರ್ಕಾರ ವಕ್ಫ್ ಮಂಡಳಿಗಳನ್ನು ನಿಯಂತ್ರಿಸಲು ಬಯಸುವುದಿಲ್ಲ, ಬದಲಿಗೆ ಅವು ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ವಕ್ಫ್ ಆಸ್ತಿಗಳನ್ನು ಮುಸ್ಲಿಂ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕಾಗಿ ಬಳಸಲಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. 

ಪಕ್ಷದ 46ನೇ ಸಂಸ್ಥಾಪನಾ ದಿನದ ಪ್ರಯುಕ್ತ ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ‘ಟರ್ಕಿ ಮತ್ತು ಇತರ ಹಲವು ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳು ವಕ್ಫ್ ಆಸ್ತಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಆದರೆ ನಾವು ವಕ್ಫ್ ಮಂಡಳಿಯನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ. ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಿ ಎಂದು ಮಾತ್ರ ಕೇಳುತ್ತಿದ್ದೇವೆ. ವಕ್ಫ್ ಕಾನೂನು ರೀತ್ಯಾ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ಗುರಿಯಾಗಿದೆ’ ಎಂದರು.