ಸಾರಾಂಶ
ಚಂಡೀಗಢ: 13 ಜನರ ಬಲಿ ಪಡೆದ ದೆಹಲಿ ಕಾರು ಸ್ಫೋಟ ಪ್ರಕರಣದ ಬಹುತೇಕ ರೂವಾರಿಗಳು ಫರೀದಾಬಾದ್‌ನ ಅಲ್ ಫಲಾ ವಿವಿಯ ಸಿಬ್ಬಂದಿ ಎಂಬ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಅದೇ ವಿವಿಯ ಇನ್ನೂ 200 ವೈದ್ಯರು, ವೈದ್ಯಕಿಯೇತರ ಸಿಬ್ಬಂದಿಗೂ ಉಗ್ರ ನಂಟು ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಶಂಕೆಯ ಮೇರೆಗೆ ವಿವಿಯ ವಿದ್ಯಾರ್ಥಿಗಳು ಸೇರಿದಂತೆ 1000ಕ್ಕೂ ಹೆಚ್ಚು ಜನರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿವೆ. ಜೊತೆಗೆ ಸ್ಫೋಟದ ಬಳಿಕ ಕಾಲೇಜು ಬಿಟ್ಟುಹೋದವರ, ಸ್ಫೋಟದ ಬಳಿಕ ಮೊಬೈಲ್‌ನಲ್ಲಿ ಮಾಹಿತಿ ಅಳಿಸಿಹಾಕಿದ ವ್ಯಕ್ತಿಗಳ ಮಾಹಿತಿ ಕಲೆಹಾಕುವ ಕೆಲಸವನ್ನೂ ಅವು ತೀವ್ರಗೊಳಿಸಿವೆ. ಜೊತೆಗೆ ಉಗ್ರರಿಗೆ ಅಲ್ ಫಲಾದಿಂದ ಆರ್ಥಿಕ ನೆರವು ನೀಡಲಾಗಿರುವ ಶಂಕೆಯೂ ಇರುವುದರಿಂದ, ವಿವಿಯಲ್ಲಿ ಉಮರ್‌ಗೆ ನೆರವಾಗುತ್ತಿರುವ ಯಾರಾದರೂ ಇರಬಹುದೇ ಎಂಬುದರ ಪತ್ತೆಗೂ ತನಿಖೆ ನಡೆಯುತ್ತಿದೆ.
ಪ್ರಕರಣ ಪ್ರಮುಖ ಆರೋಪಿಗಳಾದ ಉಮರ್ ನಬಿ, ಮುಜಮ್ಮಿಲ್, ಶಾಹೀನ್ ಸೇರಿದಂತೆ ಬಂಧಿತ ಹಲವರು ಇದೇ ವಿವಿಯಲ್ಲಿ ಓದಿದವರು.
ಕಾಶ್ಮೀರ ಟೈಮ್ಸ್ ಪತ್ರಿಕೆ ಕಚೇರೀಲಿ ಎಕೆ-47 ಗುಂಡು, ಗ್ರೆನೇಡ್ ಪತ್ತೆ
ಶ್ರೀನಗರ: ಇಲ್ಲಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಕಾಶ್ಮೀರ ಟೈಮ್ಸ್ ಪತ್ರಿಕೆ ಕಚೇರಿ ಮೇಲೆ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಈ ವೇಳೆ ಎಕೆ-47 ರೈಫಲ್‌ನಲ್ಲಿ ಬಳಸುವ ಗುಂಡು, 3 ಗ್ರೆನೇಡ್‌ಗಳು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ, ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುವ ವಿಚಾರಗಳನ್ನು ಪ್ರಚಾರ ಮಾಡಿದ್ದಾಗಿ, ಜಮ್ಮು ಕಾಶ್ಮೀರದ ಪುರಾತನ ಪತ್ರಿಕೆಗಳಲ್ಲೊಂದಾದ ಕಾಶ್ಮೀರ ಟೈಮ್ಸ್ ಮೇಲೆ ಹಾಗೂ ಅದರ ಸಂಪಾದಕಿ ಅನುರಾಧಾ ಭಾಸಿನ್ ಅವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಚೇರಿ ಮೇಲೆ ಎಸ್‌ಐಎ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಮಾರಕಾಸ್ತ್ರಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಪತ್ರಿಕೆ ಪ್ರತಿಕ್ರಿಯಿಸಿದ್ದು, ‘ಇದು ನಮ್ಮ ಧ್ವನಿ ಅಡಗಿಸುವ ಯತ್ನ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
2008ರ ಸ್ಫೋಟದ ಉಗ್ರನೂ ಅಲ್ ಪಲಾ ವಿವಿ ವಿದ್ಯಾರ್ಥಿ!
ನವದೆಹಲಿ: 2008ರಲ್ಲಿ ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 56 ಜನರನ್ನು ಆಹುತಿ ಪಡೆದ ಸರಣಿ ಸ್ಫೋಟದ ಆರೋಪಿಗಳಲ್ಲಿ ಒಬ್ಬನಾಗಿರುವ ಮಿರ್ಜಾ ಶಾದಾಬ್ ಬೇಗ್ ಕೂಡ, ಫರೀದಾಬಾದ್‌ನ ಅಲ್ ಫಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಪ್ರಸ್ತುತ ಪಾಕಿಸ್ತಾನದಲ್ಲಿರುವ ಈತ, ಉತ್ತರಪ್ರದೇಶದ ಲಾಲ್‌ಗಂಜ್‌ನವನಾಗಿದ್ದು, 2007ರಲ್ಲಿ ಅಲ್ ಫಲಾದಿಂದ ಬಿ.ಟೆಕ್ ಪದವಿ ಪಡೆದಿದ್ದ. ಬಳಿಕ ಇಂಡಿಯನ್ ಮುಜಾಹಿದೀನ್ ಉಗ್ರಸಂಘಟನೆಯ ಅಜಂಗರ್ ಮಾಡ್ಯೂಲ್‌ನ ಮುಖ್ಯಸ್ಥನಾಗಿದ್ದ. ಜೈಪುರದಲ್ಲಿ ನಡೆದ ಸ್ಫೋಟದಲ್ಲಿ ಬಳಸಲಾದ ಸ್ಫೋಟಕ ಸಂಗ್ರಹಿಸಲು ಈಗ 2008ರಲ್ಲಿ ಉಡುಪಿಗೂ ಬಂದಿದ್ದ. 2010ರಲ್ಲಿ ಪುಣೆಯಲ್ಲಿ ನಡೆದ ಜರ್ಮನ್ ಬೇಕರಿ ಸ್ಫೋಟದಲ್ಲೂ ಈತನ ಕೈವಾಡವಿದೆ.

;Resize=(128,128))
;Resize=(128,128))
;Resize=(128,128))
;Resize=(128,128))