ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪುಗೆ ಮಧ್ಯಂತರ ಜಾಮೀನು

| Published : Jan 08 2025, 12:18 AM IST / Updated: Jan 08 2025, 04:49 AM IST

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪುಗೆ ಮಧ್ಯಂತರ ಜಾಮೀನು
Share this Article
  • FB
  • TW
  • Linkdin
  • Email

ಸಾರಾಂಶ

2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ನವದೆಹಲಿ: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ಆಸಾರಾಂ ಬಾಪು ಅವರು ಹೃದ್ರೋಗದ ಜೊತೆಗೆ ವಿವಿಧ ವಯೋಸಹಜ ಆರೋಗ್ಯ ಸ್ಥಿತಿಗಳಿಂದ ಬಳಲುತ್ತಿದ್ದಾರೆ ಎಂಬ ಆತನ ಪರ ವಕೀಲರ ವಾದ ಗಮನಿಸಿದ ದ್ವಿಸದಸ್ಯ ಪೀಠ, ಜಾಮೀನಿಗೆ ಒಪ್ಪಿತು. ಈ ವೇಳೆ, ಸಾಕ್ಷ್ಯ ಹಾಳು ಮಾಡದಂತೆ ಮತ್ತು ಅನುಯಾಯಿಗಳನ್ನು ಭೇಟಿಯಾಗದಂತೆ ಷರತ್ತು ವಿಧಿಸಿತು.

ಇದಲ್ಲದೆ ಶಿಕ್ಷೆ ರದ್ದತಿ ಕೋರಿರುವ ಆತನ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬಯಸಿ ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ನೀಡಿತು.

ಬಾಪು ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ ಹಾಗೂ ಸದ್ಯ ಜೋಧಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತೆಲಂಗಾಣ ಫಾರ್ಮುಲಾ-ಇ ಹಗರಣ: ಕೆಟಿಆರ್‌ಗೆ ಬಂಧನ ಭೀತಿ

ಹೈದರಾಬಾದ್‌: ಬಿಆರ್‌ಎಸ್‌ ಅಧಿಕಾರದಲ್ಲಿ ಇದ್ದಾಗ ಫಾರ್ಮುಲಾ-ಇ ರೇಸ್‌ ನಡೆಸಿದ್ದ ವೇಳೆ, ಫಾರ್ಮುಲಾ ಕಂಪನಿ ಜತೆ ಸರ್ಕಾರ ನಡೆಸಿದ 55 ಕೋಟಿ ರು. ಹಣದ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವು ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧನದ ಭೀಇ ಶುರುವಾಗಿದೆ.ಪ್ರಕರಣದಲ್ಲಿ ಅವರ ಪಾತ್ರ ಇದ್ದಂತೆ ಕಾಣುತ್ತಿದೆ ಎಂದಿರುವ ಹೈಕೋರ್ಟ್‌, ಅವರ ವಿರುದ್ಧ ತೆಲಂಗಾಣ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ ರದ್ದತಿಗೆ ನಿರಾಕರಿಸಿದೆ. ಇದರ ಬೆನ್ನಲ್ಲೇ ಅವರಿಗೆ ಜ.16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸಿಬಿ ಕೇಸು ಆಧರಿಸಿ ಎಫ್ಐಆರ್‌ ಹಾಕಿದ್ದ ಇ.ಡಿ. ಬುಲಾವ್ ನೀಡಿದೆ. ಹೀಗಾಗಿ ರಾಮವರಾವ್‌ಗೆ ಬಂಧನ ಭೀತಿ ಶುರುವಾಗಿದೆ.

ಭಾರತದಲ್ಲಿ ಮೈಕ್ರೋಸಾಫ್ಟ್‌ 3 ಶತಕೋಟಿ ಡಾಲರ್‌ ಹೂಡಿಕೆ

ಪಿಟಿಐ ಬೆಂಗಳೂರು: ಮೈಕ್ರೋಸಾಫ್ಟ್‌ ಮುಂದಿನ 2 ವರ್ಷಗಳಲ್ಲಿ ಕ್ಲೌಡ್ ಮತ್ತು ಎಐ ಮೂಲಸೌಕರ್ಯಕ್ಕಾಗಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಮತ್ತು ಸಿಇಒ ಸತ್ಯ ನಾದೆಳ್ಲ ಪ್ರಕಟಿಸಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾದೆಳ್ಲ ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಇಂಗಿತ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಹೂಡಿಕೆ ಘೋಷಣೆ ಹೊರಬಿದ್ದಿದೆ.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ನಾದೆಳ್ಲ, ‘ಮೈಕ್ರೋಸಾಫ್ಟ್ ಭಾರತದಲ್ಲಿ ಕ್ಲೌಡ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರತದಲ್ಲಿ 3 ಶತಕೋಟಿ ಡಾಲರ್‌ ಹೂಡಿಕೆ ಮಾಡಲಿದೆ. ಇದು ಭಾರತದಲ್ಲಿ ಮೈಕ್ರೋಸಾಫ್ಟ್‌ ಮಾಡುತ್ತಿರುವ ಈವರೆಗಿನ ಅತಿದೊಡ್ಡ ಹೂಡಿಕೆ ಆಗಿದೆ ಎಂಬುದನ್ನು ಹೇಳಲು ಸಂತಸವಾಗುತ್ತಿದೆ’ ಎಂದರು.‘2030 ರ ವೇಳೆಗೆ 1 ಕೋಟಿ ಜನರಿಗೆ ಎಐನಲ್ಲಿ ತರಬೇತಿ ಮತ್ತು ಕೌಶಲ್ಯವನ್ನು ನೀಡುವ ಇರಾದೆ ನಮ್ಮದಾಗಿದೆ’ ಎಂದ ನಾದೆಳ್ಲ, ‘ಕಂಪನಿಯು ಈಗಾಗಲೇ 24 ಲಕ್ಷ ಭಾರತೀಯರನ್ನು ಸಬಲೀಕರಣಗೊಳಿಸಿದೆ, ಇದರಲ್ಲಿ ನಾಗರಿಕ ಸೇವಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ವಿಕಲಚೇತನರು, ಎಐ ಕೌಶಲ್ಯಗಳನ್ನು ಪಡೆದಿದ್ದಾರೆ’ ಎಂದರು.

ಈ ಹೂಡಿಕೆಯು ದೇಶದಲ್ಲಿ ಎಐ ಆವಿಷ್ಕಾರವನ್ನು ವೇಗಗೊಳಿಸುವ ಗುರಿ ಹೊಂದಿದೆ, ಇದು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ (ವಿಕಸಿತ್ ಭಾರತ್) ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಸಾಧಿಸಲು ಪ್ರಮುಖವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆಗೆ ಇಸ್ರೋ ಸ್ಪೇಡೆಕ್ಸ್‌ ಡಾಕಿಂಗ್‌

ನವದೆಹಲಿ: ತಾನು ಕಳಿಸಿದ್ದ ಸ್ಪೇಡೆಕ್ಸ್‌ ನೌಕೆಗಳ ಡಾಕಿಂಗ್‌ ಮತ್ತು ಅನ್‌ಡಾಕಿಂಗ್‌ ಪ್ರಕ್ರಿಯೆ ಗುರುವಾರ ಬೆಳಗ್ಗೆ 8ರಿಂದ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ.ಮಂಗಳವಾರ ಟ್ವೀಟ್‌ ಮಾಡಿರುವ ಅವರು, https://www.youtube.com/live/UCs1UWAo2I0 ಮೂಲಕ ನೇರಪ್ರಸಾರ ವೀಕ್ಷಿಸಬಹುದು ಎಂದು ತಿಳಿಸಿದೆ.

ಡಿ.30ರಂದು ಇಸ್ರೋ, ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್‌ 2 ಎಂಬ ಎರಡು ನೌಕೆಗಳನ್ನು ಹಾರಿಬಿಟ್ಟಿತ್ತು. ಅದರ ಡಾಕಿಂಗ್‌ನಲ್ಲಿ ಯಶ ಕಂಡರೆ ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು

ಹೈದರಾಬಾದ್‌: ಪುಷ್ಪ-2 ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನನ್ನು ನಟ ಅಲ್ಲು ಅರ್ಜುನ್‌ ಮಂಗಳವಾರ ಭೇಟಿಯಾಗಿದ್ದಾರೆ.ಅಲ್ಲು ಸುಮಾರು 10 ನಿಮಿಷಗಳನ್ನು ಗಾಯಾಳು ಶ್ರೀತೇಜ್‌(8)ನೊಂದಿಗೆ ಕಳೆದಿದ್ದು, ನಿರ್ಮಾಪಕ ಹಾಗೂ ತೆಲಂಗಾಣ ಫಿಲಂ ಡೆವಲಪ್ಮೆಂಟ್‌ ಕಾರ್ಪೊರೇಷನ್‌ನ ಅಧ್ಯಕ್ಷರಾಗಿರುವ ವೆಂಕಟರಮಣ ರೆಡ್ಡಿ ಕೂಡ ಅವರೊಂದಿಗಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತು ಒದಗಿಸಲಾಗಿತ್ತು.

ಈ ಮೊದಲು ಜ.5ರಂದು ಅಲ್ಲು ಆಸ್ಪತ್ರೆಗೆ ಭೇಟಿ ನೀಡಬೇಕಿತ್ತಾದರೂ, ನಂತರ ಅದು ರದ್ದಾಗಿತ್ತು.ಯಾವುದೇ ಬಾಹ್ಯ ಬೆಂಬಲವಿಲ್ಲದೆ ಶ್ರೀತೇಜ್‌ರ ಪ್ರಮುಖ ಪ್ಯಾರಾಮೀಟರ್‌ಗಳು ಉತ್ತಮವಾಗಿದ್ದು, ರೋಗನಿರೋಧಕ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.

ಡಿ.4ರಂದು ಇಲ್ಲಿನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ-2 ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಶ್ರೀತೇಜ್‌ನ ತಾಯಿ ಸಾವನ್ನಪ್ಪಿದ್ದರು.