ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ: ಸುಪ್ರೀಂ

| Published : Nov 06 2024, 11:50 PM IST / Updated: Nov 06 2024, 11:51 PM IST

ಸಾರಾಂಶ

ಉತ್ತರ ಪ್ರದೇಶದಲ್ಲಿ ಅಧಿಕಾರಿಗಳಿಂದ ರಾತ್ರೋರಾತ್ರಿ ಮನೆ ಧ್ವಂಸ ಪ್ರಕರಣಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, ನೀವು ಏಕಾಏಕಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ ಎಂದು ತಿಳಿಸಿದೆ.

ಪಿಟಿಐ ನವದೆಹಲಿ

ಉತ್ತರ ಪ್ರದೇಶದಲ್ಲಿ ಅಧಿಕಾರಿಗಳಿಂದ ರಾತ್ರೋರಾತ್ರಿ ಮನೆ ಧ್ವಂಸ ಪ್ರಕರಣಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, ನೀವು ಏಕಾಏಕಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ ಎಂದು ತಿಳಿಸಿದೆ.

2019ರಲ್ಲಿ ರಸ್ತೆ ಅಗಲೀಕರಣಕ್ಕಾಗಿ ವ್ಯಕ್ತಿಯೊಬ್ಬರ ಮನೆಯನ್ನು ಏಕಾಏಕಿ ಧ್ವಂಸ ಮಾಡಿದ ಯುಪಿ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಲಯ ಬಾಧಿತ ವ್ಯಕ್ತಿಗೆ ₹25 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೆ, ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.

ಧ್ವಂಸ ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್‌, ನ್ಯಾ। ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ। ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ, ‘ನೀವು ರಾತ್ರೋರಾತ್ರಿ ಏಕಾಏಕಿ ಬಂದು ಮನೆಯನ್ನು ಧ್ವಂಸ ಮಾಡುವಂತಿಲ್ಲ. ಸೂಕ್ತ ನೋಟೀಸ್‌ ನೀಡದೆ ಧ್ವಂಸ ಮಾಡಿದರೆ ವಾಸವಿರುವ ಕುಟುಂಬಗಳು ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿ, ‘ಮಹಾರಾಜಗಂಜ್ ಜಿಲ್ಲೆಯಲ್ಲಿ ನಡೆದಿರುವ ಅನಧಿಕೃತ ಧ್ವಂಸಗಳ ವಿರುದ್ಧ ತನಿಖೆ ನಡೆಸಬೇಕು’ ಎಂದು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿಗೆ ತಿಳಿಸಿತು.