ಸಾರಾಂಶ
ಮುಂಬೈ: ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ 21 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಒಬ್ಬರು ವಿಪಕ್ಷದವರಾದರೆ, ಉಳಿದವರು ಮಹಾಯುತಿ ಕೂಟದವರು. ಬಿಜೆಪಿಯಿಂದ ಅತಿ ಹೆಚ್ಚು, 14 ಮಹಿಳಾ ಅಭ್ಯರ್ಥಿಗಳು ಜಯ ಗಳಿಸಿದ್ದು, ಇವರಲ್ಲಿ 10 ಮಂದಿ ಮರು ಆಯ್ಕೆ ಆದವರು. ಉಳಿದಂತೆ ಶಿವಸೇನೆ(ಶಿಂಧೆ ಬಣ)ಯ 2, ಎನ್‌ಸಿಪಿ(ಅಜಿತ್ ಬಣ) 4 ಮಹಿಳೆಯರು ವಿಜಯಿಯಾಗಿದ್ದಾರೆ. ಅತ್ತ ಜ್ಯೋತಿ ಗಾಯಕ್ವಾಡ್ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದಾರೆ.
ಪವಾರ್ ವರ್ಸಸ್ ಪವಾರ್ ವಾರ್
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಜಿತ್ ಪವಾರ್ ಬಣದ ಎನ್‌ಸಿಪಿ ಮತ್ತು ಶರದ್ ಪವಾರ್ ಬಣದ ಎನ್‌ಸಿಪಿ ನಡುವಿನ ಹೋರಾಟದಲ್ಲಿ ಅಜಿತ್ ಬಣದ ಕೈ ಮೇಲಾಗಿದೆ. ಒಟ್ಟು 29 ಕ್ಷೇತ್ರಗಳಲ್ಲಿ ಶರದ್ ಬಣದ ಅಭ್ಯರ್ಥಿಗಳನ್ನು ಅಜಿತ್ ಬಣದ ಅಭ್ಯರ್ಥಿಗಳು ಸೋಲಿಸಿದ್ದಾರೆ. ಆಡಳಿತಾರೂಢ ಮಹಾಯುತಿಯ ಭಾಗವಾಗಿರುವ ಎನ್‌ಸಿಪಿ (ಅಜಿತ್ ಬಣ) 59 ಸ್ಥಾನಗಳಲ್ಲಿ ಸ್ಪರ್ಧಿಸಿ 41ರಲ್ಲಿ ಗೆದ್ದಿದೆ. ಅತ್ತ 86 ಅಭ್ಯರ್ಥಿಗಳ ಕಣಕ್ಕಿಳಿಸಿದ್ದ ಶರದ್‌ರ ಪಕ್ಷ ಕೇವಲ 10 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಬಾರಾಮತಿ ಕ್ಷೇತ್ರದಲ್ಲಿ ಅಜಿತ್ ತಮ್ಮ ಸಂಬಂಧಿ ಯುಗೇಂದ್ರ ಪವಾರ್ ಅವರನ್ನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದರು.
ಸೇನೆ ವರ್ಸಸ್ ಸೇನೆ ಸಮರ
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯು ಉದ್ಧವ್‌ರ ಶಿವಸೇನೆಯನ್ನು 36 ಕ್ಷೇತ್ರಗಳಲ್ಲಿ ಮಣಿಸಿದೆ. ಮಹಾಯುತಿಯ ಭಾಗವಾಗಿರುವ ಶಿಂಧೆಯವರ ಶಿವಸೇನೆ 81 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 57 ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿದೆ. ಅತ್ತ ವಿಪಕ್ಷ ಕೂಟವಾದ ಮಹಾ ವಿಕಾಸ ಅಘಾಡಿಯ ಭಾಗವಾಗಿರುವ ಉದ್ಧವ್‌ರ ಶಿವಸೇನೆ ಕಣಕ್ಕಿಳಿಸಿದ್ದ 95 ಅಭ್ಯರ್ಥಿಗಳ ಪೈಕಿ ಕೇವಲ 20 ಮಂದಿ ವಿಜಯಿಯಾಗಿದ್ದಾರೆ. ಜೊತೆಗೆ ಪರಸ್ಪರು ಸ್ಪರ್ಧಿಸಿದ್ದ ಕ್ಷೇತ್ರಗಳ ಪೈಕಿ 36ರಲ್ಲಿ ಉದ್ಧವ್ ಅಭ್ಯರ್ಥಿಗಳನ್ನು ಶಿಂಧೆ ಅಭ್ಯರ್ಥಿಗಳು ಸೋಲಿಸಿದ್ದಾರೆ.
162 ಅತಿ ಕಡಿಮೆ ಅಂತರ, 1.45 ಲಕ್ಷ ಗರಿಷ್ಠ ಮತಗಳ ಅಂತರ
ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಅತಿ ಹೆಚ್ಚು ಹಾಗೂ ಅತಿ ಕಡಿಮೆ ಮತಗಳ ಅಂತರದಲ್ಲಿ ಜಯ ಗಳಿಸಿರುವುದು ಗಮನ ಸೆಳೆದಿದೆ.ಬಿಜೆಪಿಯ ಕಾಶಿರಾಮ್ ಪವಾರ್ ಅತಿ ಹೆಚ್ಚು, ಬರೋಬ್ಬರಿ 1,45,944 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅತ್ತ ನಾಸಿಕ್ ಜಿಲ್ಲೆಯ ಮಲೆಗಾವ್ ಸೆಂಟ್ರಲ್‌ನ ಎಐಎಂಐಎಂ ಅಭ್ಯರ್ಥಿ ಮುಫ್ತಿ ಮೊಹಮ್ಮದ್ ಅವರು ಅತ್ಯಂತ ಕಡಿಮೆ, 162 ಮತಗಳ ಅಂತರದಿಂದ ಗೆದ್ದರೆ, ಭಂಡಾರಾ ಜಿಲ್ಲೆಯ ಸಕೋಲಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಬಿಜೆಪಿ ಅಭ್ಯರ್ಥಿ ಅವಿನಾಶ್ ಬ್ರಾಹ್ಮಣ್‌ಕರ್ ವಿರುದ್ಧ 208 ಮತಗಳಿಂದ ಮೇಲುಗೈ ಸಾಧಿಸಿದ್ದಾರೆ.
ಮುಂಬೈನ 36 ಸ್ಥಾನಗಳಲ್ಲಿ ಮಯಾಯುತಿಗೆ 22 ಸ್ಥಾನ
ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ರಾಜಧಾನಿ ಮುಂಬೈ ವ್ಯಾಪ್ತಿಯ 36 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಮುಂದಿನ ವರ್ಷ ನಡೆಯಲಿರುವ ಬೃಹನ್ಮುಂಬೈ ಪಾಲಿಕೆ ಕೈವಶ ಮಾಡಿಕೊಳ್ಳುವ ಮೈತ್ರಿಕೂಟ ಕನಸಿಗೆ ಮತ್ತಷ್ಟು ಬಲ ತುಂಬಿದೆ. ಉಳಿದಂತೆ ಮುಂಬೈನಲ್ಲಿ ಬಿಜೆಪಿ ತಾನು ಸ್ಪರ್ಧಿಸಿದ್ದ 17 ಸ್ಥಾನಗಳ ಪೈಕಿ 15ದನ್ನು ತನ್ನದಾಗಿಸಿಕೊಂಡಿದೆ. ಇನ್ನು ಮುಂಬೈ ಪಾಲಿಕೆ ಅಧಿಕಾರ ಹೊಂದಿರುವ ಉದ್ಧವ್ ಠಾಕ್ರೆ ಅವರ ಶಿವಸೇನೆ ಕೇವಲ 10 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
19 ಕ್ಷೇತ್ರಗಳಲ್ಲಿ 2ನೇ ಸ್ಥಾನ ಪಡೆದ ಪಕ್ಷೇತರರು!
ಮುಂಬೈ: ಆಡಳಿತಾರೂಢ ಮಹಾಯುತಿ ಹಾಗೂ ವಿಪಕ್ಷ ಮಹಾ ವಿಕಾಸ್ ಅಘಾಡಿ ನಡುವಿನ ಜಿದ್ದಾಜಿದ್ದಿನಂತಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಸ್ವತಂತ್ರ ಅಭ್ಯರ್ಥಿಗಳು ಕೂಡ ತಮ್ಮ ಬಲ ಪ್ರದರ್ಶಿಸಿದ್ದಾರೆ. ಕಣದಲ್ಲಿದ್ದ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಪುಣೆ ಜಿಲ್ಲೆಯ ಜುನ್ನಾರ್‌ನಿಂದ ಶರದ್ದದಾ ಸೋನವಾನೆ ಹಾಗೂ ಕೊಲ್ಹಾಪುರದ ಚಂಗದ್‌ನಿಂದ ಶಿವಾಜಿ ಪಾಟಿಲ್ ಜಯ ಗಳಿಸಿದ್ದಾರೆ. ಒಟ್ಟು 2,086 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.