ಇಸ್ರೇಲ್‌ನ ಪೇಜರ್‌ ಬಾಂಬ್‌ : ಹಿಜ್ಬುಲ್ಲಾ ವಿರುದ್ಧದ ಕಾರ್ಯಾಚರಣೆಯ ಹಿಂದಿನ ರಹಸ್ಯ

| Published : Sep 19 2024, 01:46 AM IST / Updated: Sep 19 2024, 05:17 AM IST

ಸಾರಾಂಶ

ಇಸ್ರೇಲ್‌ ಉಗ್ರರ ವಿರುದ್ಧ ನಡೆಸಿದ ಪೇಜರ್‌ ಬಾಂಬ್‌ ದಾಳಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಉತ್ಪಾದನಾ ಹಂತದಲ್ಲೇ ಪೇಜರ್‌ಗಳಲ್ಲಿ ಸ್ಫೋಟಕ ಅಳವಡಿಸಲಾಗಿದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಬೈರೂತ್‌: ತನ್ನ ದೇಶದ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಲೆಬನಾನ್‌ ಹಾಗೂ ಸಿರಿಯಾದಲ್ಲಿನ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಹಸ್ರಾರು ಪೇಜರ್‌ಗಳನ್ನು ಏಕಕಾಲಕ್ಕೆ ಸ್ಫೋಟಿಸುವ ಮೂಲಕ ವಿಶ್ವವನ್ನೇ ಚಕಿತಗೊಳಿಸಿರುವ ಇಸ್ರೇಲ್‌, ಈ ಕಾರ್ಯಾಚರಣೆಯನ್ನು ಹೇಗೆ ನಡೆಸಿತು ಎಂಬುದು ಕುತೂಹಲ ಕೆರಳಿಸಿದೆ. ಇದರ ಬೆನ್ನತ್ತಿ ಹೋದಾಗ ವಿಶ್ವವೇ ಅಚ್ಚರಿಪಡುವಂತಹ ಸಂಗತಿ ಬೆಳಕಿಗೆ ಬಂದಿದೆ.

ಈ ಪೇಜರ್‌ಗಳು ಉತ್ಪಾದನಾ ಹಂತದಲ್ಲಿರುವಾಗಲೇ, ಪ್ರತಿ ಪೇಜರ್‌ನಲ್ಲೂ ಕೋಡ್‌ ಮೂಲಕ ಸ್ಫೋಟಿಸಬಹುದಾದ 3 ಗ್ರಾಂ ಸ್ಫೋಟಕವನ್ನು ಇಸ್ರೇಲ್‌ ರಹಸ್ಯವಾಗಿ ಅಳವಡಿಕೆ ಮಾಡಿತ್ತು. ಈ ಸಂಗತಿ ಗೊತ್ತಿಲ್ಲದೆ ಹಲವು ತಿಂಗಳುಗಳ ಕಾಲ ಉಗ್ರರು ಬಾಂಬ್‌ ಇದ್ದ ಪೇಜರ್‌ ಬಳಸಿದ್ದರು ಎಂದು ತಿಳಿದು ಬಂದಿದೆ.

ಇಸ್ರೇಲ್‌ ಕಣ್ಗಾವಲಿನಿಂದ ಪಾರಾಗಲು ಹಿಜ್ಬುಲ್ಲಾ ಉಗ್ರ ಸಂಘಟನೆ ತನ್ನ ಸದಸ್ಯರಿಗೆ ಪೇಜರ್‌ ಮೊರೆ ಹೋಗಲು ಸೂಚಿಸಿತ್ತು. 5000 ಪೇಜರ್‌ಗಳನ್ನು ಒದಗಿಸುವಂತೆ ತೈವಾನ್‌ ಮೂಲದ ಗೋಲ್ಡ್‌ ಅಪೋಲೋ ಕಂಪನಿಗೆ ಸೂಚಿಸಿತ್ತು. ಗೋಲ್ಡ್‌ ಅಪೋಲೋ ಹೆಸರಿನಲ್ಲಿ ಈ ಪೇಜರ್‌ಗಳು ಯುರೋಪ್‌ನ ಕಂಪನಿಯಲ್ಲಿ ತಯಾರಾಗಿದ್ದವು.

ಈ ವಿಷಯವನ್ನು ಹೇಗೋ ಪತ್ತೆ ಹಚ್ಚಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಪೇಜರ್‌ಗಳು ಕಾರ್ಖಾನೆಯಲ್ಲಿ ತಯಾರಿಕಾ ಹಂತದಲ್ಲಿರುವಾಗಲೇ ಅದಕ್ಕೆ ತಲಾ 3 ಗ್ರಾಂ ಸ್ಫೋಟಕ ತುಂಬಿದ ಬೋರ್ಡ್‌ಗಳನ್ನು ಅಳವಡಿಕೆ ಮಾಡಿತ್ತು. ಯಾವುದೇ ಸ್ಕ್ಯಾನರ್‌ ಅಥವಾ ಉಪಕರಣ ಬಳಸಿದರೂ ಈ ಸ್ಫೋಟಕ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಂಗಳವಾರ ಈ ಪೇಜರ್‌ಗಳಿಗೆ ನಿರ್ದಿಷ್ಟ ಕೋಡ್‌ ಕಳುಹಿಸಿದಾಗ ಅವು ಸ್ಫೋಟಗೊಂಡಿವೆ ಎಂದು ಮೂಲಗಳು ತಿಳಿಸಿವೆ.

==

ಯುದ್ಧದ ಹೊಸ ಅಧ್ಯಾಯ ಶುರು: ಇಸ್ರೇಲ್‌ ಘೋಷಣೆ

ಜೆರುಸಲೆಂ: ಲೆಬನಾನ್‌ನಲ್ಲಿ ಕಳೆದ ಎರಡು ದಿನಗಳಿಂದ ಪೇಜರ್‌, ವಾಕಿಟಾಕಿ, ರೇಡಿಯೋ ಸೆಟ್‌, ಸೋಲಾರ್‌ ಸಿಸ್ಟಮ್‌ ಬಾಂಬ್‌ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಯುದ್ಧ ಹೊಸ ಮಜಲಿನತ್ತ ತಿರುಗಿದೆ ಎಂದು ಇಸ್ರೇಲ್‌ ಮಾರ್ಮಿಕ ಹೇಳಿಕೆ ನೀಡಿದೆ.ಬುಧವಾರ ತಮ್ಮ ಯೋಧರನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸೈನಿಕರು ಹಾಗೂ ಭದ್ರತಾ ಸಂಸ್ಥೆಗಳ ಕೆಲಸವನ್ನು ಪ್ರಶಂಸಿಸಿದ್ದು, ‘ಗಾಜಾದಲ್ಲಿನ ಹಮಾಸ್‌ ಉಗ್ರರ ವಿರುದ್ಧದ ಯುದ್ಧದ ಬಳಿಕ ಪಡೆಗಳನ್ನು ಉತ್ತರದ ಕಡೆ ತಿರುಗಿಸಲಾಗುತ್ತಿದೆ. ಇದು ಯುದ್ಧದ ಹೊಸ ಹಂತವಾಗಿದ್ದು, ಧೈರ್ಯ, ಸಂಕಲ್ಪ ಮತ್ತು ಪರಿಶ್ರಮದ ಅಗತ್ಯವಿದೆ’ ಎಂದರು. ಈ ಮೂಲಕ ಹಿಜ್ಬುಲ್ಲಾ ಉಗ್ರರ ನೆಲೆವೀಡಾಗಿರುವ ಲೆಬನಾನ್‌ನತ್ತ ಹೆಚ್ಚಿನ ಸೇನೆಯನ್ನು ನಿಯೋಜಿಸಿರುವ ಸುಳಿವು ನೀಡಿದ್ದಾರೆ.

ಉಗ್ರರ ಬಾಂಬ್‌ ಪೇಜರ್‌ಗಳು ತಯಾರಾಗಿದ್ದು ಹಂಗೇರಿಯಲ್ಲಿ

ಲೆಬನಾನ್‌ ಹಾಗೂ ಸಿರಿಯಾದಲ್ಲಿರುವ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ, ಇಸ್ರೇಲ್‌ನಿಂದ ದಾಳಿಗೆ ತುತ್ತಾದ ಪೇಜರ್‌ಗಳು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಯಾರಾಗಿದ್ದವು ಎಂದು ತಿಳಿದುಬಂದಿದೆ. ತೈವಾನ್‌ ಮೂಲದ ಗೋಲ್ಡ್‌ ಅಪೋಲೋ ಕಂಪನಿಯ ಪೇಜರ್‌ಗಳನ್ನು ಉಗ್ರರು ಬಳಸುತ್ತಿದ್ದರು. ಆದರೆ ಆ ಬ್ರ್ಯಾಂಡ್‌ ಬಳಕೆ ಮಾಡಲು ತಾವು ಹಂಗೇರಿಯ ಬಿಎಸಿ ಕನ್ಸಲ್ಟಿಂಗ್‌ ಕೆಎಫ್‌ಟಿ ಕಂಪನಿಗೆ ಅನುಮತಿ ನೀಡಿದ್ದೆವು ಎಂದು ಗೋಲ್ಡ್‌ ಅಪೋಲೋ ಹೇಳಿಕೊಂಡಿದೆ.

ಅಮೆರಿಕಗೆ ಇಸ್ರೇಲ್‌ ಮಾಹಿತಿಉಗ್ರರ ಮೇಲೆ ತಾನು ನಡೆಸಿದ ಪೇಜರ್‌ ಬಾಂಬ್‌ ದಾಳಿ ಕುರಿತು ಇಸ್ರೇಲ್‌ ಸರ್ಕಾರ ಅಮೆರಿಕದ ಅಧಿಕಾರಿಗಳಿಗೆ ಮಂಗಳವಾರವೇ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈಗಲೂ ಪೇಜರ್‌ ಬಳಸುವುದು ಏಕೆ?

ಪೇಜರ್‌ಗಳನ್ನು ಒಮ್ಮೆ ಚಾರ್ಜ್‌ ಮಾಡಿದರೆ 85 ದಿನ ಕೆಲಸ ಮಾಡುತ್ತವೆ. ವಿವಿಧ ವೈರ್‌ಲೆಸ್‌ ನೆಟ್‌ವರ್ಕ್‌ಗಳಲ್ಲೂ ಇವು ಕೆಲಸ ಮಾಡುತ್ತವೆ. ಹೀಗಾಗಿ ವಿಶ್ವಾದ್ಯಂತ ಹೆಚ್ಚಿನ ಆಸ್ಪತ್ರೆಗಳು ಪೇಜರ್‌ಗಳನ್ನು ಬಳಕೆ ಮಾಡುತ್ತವೆ. ಆರ್ಥಿಕ ದುಸ್ಥಿತಿ ಹೊಂದಿರುವ ಲೆಬನಾನ್‌ನಲ್ಲಿ ವಿದ್ಯುತ್‌ ಸಮಸ್ಯೆ ಇದೆ. ಹೀಗಾಗಿ ಒಮ್ಮೆ ಚಾರ್ಜ್‌ ಮಾಡಿದರೆ ದೀರ್ಘಾವಧಿಗೆ ಬಳಸಬಹುದಾದ ಕಾರಣ ಅಲ್ಲಿನ ಜನರು ಪೇಜರ್‌ ಬಳಸುತ್ತಾರೆ.

ಲಕ್ಷಗಟ್ಟಲೆ ಪೇಜರ್‌ಗಳು ಬಿಕರಿ

2022ರ ಆರಂಭದಿಂದ 2024ರ ಆಗಸ್ಟ್‌ವರೆಗೆ ಗೋಲ್ಡ್‌ ಅಪೋಲೋ ಕಂಪನಿ 2.60 ಲಕ್ಷ ಪೇಜರ್‌ಗಳನ್ನು ವಿಶ್ವದ ವಿವಿಧ ಭಾಗಳಿಗೆ ರಫ್ತು ಮಾಡಿದೆ. ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ 40 ಸಾವಿರ ಪೇಜರ್‌ಗಳನ್ನು ಕಳುಹಿಸಿಕೊಟ್ಟಿದೆ. ಐರೋಪ್ಯ, ಅಮೆರಿಕ ದೇಶಗಳಿಂದಲೇ ಬೇಡಿಕೆ ಹೆಚ್ಚಿದೆ.

ಉಗ್ರರಿಗೇಕೆ ಪೇಜರ್‌ ಅಚ್ಚುಮೆಚ್ಚು?

ಲೆಬನಾನ್‌ನಲ್ಲಿರುವ ಮೊಬೈಲ್‌ ಫೋನ್‌ಗಳ ಮೇಲೆ ಇಸ್ರೇಲ್‌ ತೀವ್ರ ನಿಗಾ ಇಟ್ಟಿದೆ. ಹೀಗಾಗಿ ಉಗ್ರರಿಗೆ ಮೊಬೈಲ್‌ ಬಳಸದಂತೆ ಹಿಜ್ಬುಲ್ಲಾ ಸಂಘಟನೆ ತಾಕೀತು ಮಾಡಿದೆ. ‘ನಿಮ್ಮ ಕೈಯಲ್ಲಿರುವ, ನಿಮ್ಮ ಪತ್ನಿ ಬಳಸುತ್ತಿರುವ ಹಾಗೂ ನಿಮ್ಮ ಮಕ್ಕಳು ಉಪಯೋಗಿಸುತ್ತಿರುವ ಮೊಬೈಲ್‌ಗಳು ಅತ್ಯಂತ ಅಪಾಯಕಾರಿ ಏಜೆಂಟ್‌ ಇದ್ದಂತೆ. ಇಸ್ರೇಲಿ ಬೇಹುಗಾರರಿಗಿಂತ ಅಪಾಯಕಾರಿ. ಅತ್ಯಂತ ನಿರ್ದಿಷ್ಟ ಹಾಗೂ ನಿಖರ ಮಾಹಿತಿಯನ್ನು ಇವು ರವಾನಿಸುತ್ತವೆ. ಹೀಗಾಗಿ ಅವನ್ನು ಒಡೆದು ಹಾಕಿ, ಮಣ್ಣಿನಲ್ಲಿ ಹೂತುಬಿಡಿ ಅಥವಾ ಕಬ್ಬಿಣದ ಪೆಟ್ಟಿಗೆಯಲ್ಲಿ ಬೀಗ ಹಾಕಿಡಿ’ ಎಂದು ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಾಲ್ಲಾ ಫೆಬ್ರವರಿಯಲ್ಲಿ ಮಾಡಿದ ಬಹಿರಂಗ ಭಾಷಣದಲ್ಲೇ ಹೇಳಿದ್ದ. ಹಿಜ್ಬುಲ್ಲಾ ಸಂಘಟನೆಯೇ ತನ್ನ ಸದಸ್ಯರಿಗೆ ಪೇಜರ್‌ ಒದಗಿಸುತ್ತಿದೆ.