ಮ.ಪ್ರ. ಭೋಜಶಾಲಾ ಪ್ರಾಂಗಣದಲ್ಲಿ 39 ಹಿಂದೂ ಭಗ್ನ ವಿಗ್ರಹ ಪತ್ತೆ!

| Published : Jul 01 2024, 01:56 AM IST / Updated: Jul 01 2024, 05:31 AM IST

ಸಾರಾಂಶ

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ/ಕಮಲ್‌ ಮೌಲಾ ಮಸೀದಿಯ ಪ್ರಾಂಗಣದಲ್ಲಿ ಹೈಕೋರ್ಟ್‌ನ ಆದೇಶದಂತೆ ಕೈಗೊಳ್ಳಲಾಗಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ)ದ ಉತ್ಖನನ ಮುಕ್ತಾಯಗೊಂಡಿದ್ದು, 39 ಭಗ್ನ ಹಿಂದೂ ವಿಗ್ರಹಗಳು ಲಭಿಸಿವೆ. ಒಟ್ಟು 1710 ಅವಶೇಷಗಳು ಪತ್ತೆಯಾಗಿವೆ.

ಭೋಪಾಲ್‌: ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ/ಕಮಲ್‌ ಮೌಲಾ ಮಸೀದಿಯ ಪ್ರಾಂಗಣದಲ್ಲಿ ಹೈಕೋರ್ಟ್‌ನ ಆದೇಶದಂತೆ ಕೈಗೊಳ್ಳಲಾಗಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ)ದ ಉತ್ಖನನ ಮುಕ್ತಾಯಗೊಂಡಿದ್ದು, 39 ಭಗ್ನ ಹಿಂದೂ ವಿಗ್ರಹಗಳು ಲಭಿಸಿವೆ. ಒಟ್ಟು 1710 ಅವಶೇಷಗಳು ಪತ್ತೆಯಾಗಿವೆ.

ಉತ್ಖನನದಲ್ಲಿ ಲಭಿಸಿರುವ ವಿಗ್ರಹಗಳಲ್ಲಿ ವಾಗ್ದೇವಿ (ಸರಸ್ವತಿ), ಮಹಿಷಾಸುರ ಮರ್ದಿನಿ, ಗಣೇಶ, ಕೃಷ್ಣ, ಮಹಾದೇವ, ಬ್ರಹ್ಮ ಹಾಗೂ ಹನುಮಂತನ ವಿಗ್ರಹಗಳು ಸೇರಿವೆ ಎಂದು ಹೇಳಲಾಗಿದೆ. ಆದರೆ, ಮುಸ್ಲಿಂ ಪಕ್ಷಗಾರರು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ‘ಇವು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದ್ದಾರೆ.

ಎಎಸ್‌ಐ ಅಧಿಕಾರಿಗಳು 98 ದಿನಗಳ ಕಾಲ ಸಮೀಕ್ಷೆ ನಡೆಸಿ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಜು.4ರೊಳಗೆ ವಿವರವನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಬಳಿಕ ಇನ್ನಷ್ಟು ಆಳವಾಗಿ ಉತ್ಖನನ ನಡೆಸಲು ಅವಕಾಶ ಕೇಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಏನಿದು ಭೋಜಶಾಲಾ ವಿವಾದ?: ಧಾರ್‌ ಜಿಲ್ಲೆಯಲ್ಲಿರುವ ಭೋಜಶಾಲಾ ಎಂಬ ಧಾರ್ಮಿಕ ಸ್ಥಳ ತಮಗೆ ಸೇರಿದ್ದು ಎಂದು ಹಿಂದೂ, ಮುಸಲ್ಮಾನರಿಬ್ಬರೂ ವಾದಿಸುತ್ತಾರೆ. ಹಿಂದೂಗಳು ಇಲ್ಲಿ ಮಧ್ಯಕಾಲೀನ ಕೆತ್ತನೆಯಿರುವ ವಾಗ್ದೇವಿ ದೇಗುಲವಿದೆ ಎಂದು ಪ್ರತಿ ಮಂಗಳವಾರ ಪೂಜೆ ಸಲ್ಲಿಸುತ್ತಾರೆ. ಮುಸಲ್ಮಾನರು ಈ ಜಾಗವನ್ನು ಕಮಲ್‌ ಮೌಲಾ ಮಸೀದಿ ಎಂದು ಕರೆದು, ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವ್ಯಾಜ್ಯ ಕೋರ್ಟ್‌ನ ಮೆಟ್ಟಿಲೇರಿದ್ದು, ಮೂಲತಃ ಈ ಕಟ್ಟಡ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ಮಧ್ಯಪ್ರದೇಶದ ಹೈಕೋರ್ಟ್‌ ಈ ವರ್ಷಾರಂಭದಲ್ಲಿ ಆದೇಶಿಸಿತ್ತು.