40 ಬೆಂಗಾವಲು ವಾಹನ, 700 ಭದ್ರತಾ ಸಿಬ್ಬಂದಿ ರಕ್ಷಣೆಯಲ್ಲಿ ಭೋಪಾಲ್‌ ತ್ಯಾಜ್ಯ ರವಾನೆ

| Published : Jan 03 2025, 12:31 AM IST / Updated: Jan 03 2025, 04:56 AM IST

ಸಾರಾಂಶ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 5,479 ಜನರ ಸಾವಿಗೆ ಕಾರಣವಾದ ಅನಿಲ ಸೋರಿಕೆ ದುರಂತ ನಡೆದ ಬರೋಬ್ಬರಿ 40 ವರ್ಷಗಳ ಬಳಿಕ ಅದರ ತ್ಯಾಜ್ಯವನ್ನು ಘಟನಾ ಸ್ಥಳದಿಂದ ವಿಲೇವಾರಿ ಸ್ಥಳಕ್ಕೆ ಬುಧವಾರ ತಡರಾತ್ರಿ ರವಾನಿಸಲಾಯಿತು.

ಧಾರ್‌: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 5,479 ಜನರ ಸಾವಿಗೆ ಕಾರಣವಾದ ಅನಿಲ ಸೋರಿಕೆ ದುರಂತ ನಡೆದ ಬರೋಬ್ಬರಿ 40 ವರ್ಷಗಳ ಬಳಿಕ ಅದರ ತ್ಯಾಜ್ಯವನ್ನು ಘಟನಾ ಸ್ಥಳದಿಂದ ವಿಲೇವಾರಿ ಸ್ಥಳಕ್ಕೆ ಬುಧವಾರ ತಡರಾತ್ರಿ ರವಾನಿಸಲಾಯಿತು.

ಸೋರಿಕೆ ನಡೆದ ಯೂನಿಯನ್‌ ಕಾರ್ಬೈಡ್ ಕಾರ್ಖಾನೆಯಿಂದ 377 ಟನ್‌ ತ್ಯಾಜ್ಯವನ್ನು 12 ಟ್ರಕ್‌ಗಳಲ್ಲಿ ತುಂಬಿ ಸೀಲ್‌ ಮಾಡಲಾಗಿದ್ದು, ನಂತರ 250 ಕಿಮೀ ದೂರದ ಧಾರ್‌ ಜಿಲ್ಲೆಯಲ್ಲಿರುವ ವಿಲೇವಾರಿ ಘಟಕಕ್ಕೆ ಸಾಗಿಸಲಾಗಿದೆ. ಇದಕ್ಕೆಂದೇ ಹಸಿರು ಮಾರ್ಗವನ್ನೂ ರಚಿಸಲಾಗಿತ್ತು. ಬುಧವಾರ ರಾತ್ರಿ 9 ಗಂಟೆಗೆ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಗುರುವಾರ ಬೆಳಗ್ಗೆ 3:30ರ ಸುಮಾರಿಗೆ ಸಂಪನ್ನಗೊಂಡಿದೆ. ಈ ಟ್ರಕ್‌ಗಳಿಗೆ 40 ವಾಹನಗಳ ಬೆಂಗಾವಲು ಮತ್ತು 700 ಭದ್ರತಾ ಸಿಬ್ಬಂದಿಗಳ ರಕ್ಷಣೆ ಒದಗಿಸಲಾಗಿತ್ತು.

ವಿಲೇವಾರಿ ಹೇಗೆ?:ತಾಜ್ಯವನ್ನು ಮೊದಲು ಪೀತಂಪುರದ ವಿಲೇವಾರಿ ಘಟಕದಲ್ಲಿ ಸುಡಲಾಗುವುದು. ಮಾಲಿನ್ಯ ತಡೆಯುವ ಉದ್ದೇಶದಿಂದ ಹೊಗೆಯನ್ನು 4 ಪದರಗಳ ಫಿಲ್ಟರ್‌ ಮೂಲಕ ಹೊರಬಿಡಲಾಗುವುದು. ಅದರ ಬೂದಿಯಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ಪರಿಶೀಲಿಸಿ, ಸುರಕ್ಷಿತವೆನಿಸಿದರೆ ಅದು ಮಣ್ಣು ಹಾಗೂ ನೀರಿನೊಂದಿಗೆ ಸೇರದಂತೆ ಹೂಳಲಾಗುವುದು.