ಸಾರಾಂಶ
ಸುಪೌಲ್: ಅಮೆರಿಕ ಶಾಲೆಗಳಲ್ಲಿ ಗನ್ ಸಂಸ್ಕೃತಿ ಇದೆ. ಅದೇ ರೀತಿಯ ಘಟನೆ ಬಿಹಾರದಲ್ಲೂ ನಡೆದಿದೆ. 5 ವರ್ಷದ ಬಾಲಕನೊಬ್ಬ ಬುಧವಾರ ಶಾಲೆಗೆ ಗನ್ ತಂದು 3ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಬಾಲಕನ ಮೇಲೆ ಬಿಹಾರದ ಸುಪೌಲ್ ಜಿಲ್ಲೆಯ ಸೇಂಟ್ ಜೋನ್ ಬೋರ್ಡಿಂಗ್ ಶಾಲೆಯಲ್ಲಿ ಗುಂಡು ಹಾರಿಸಿದ್ದಾನೆ.
ನರ್ಸರಿಯಲ್ಲಿ ಓದುತ್ತಿದ್ದ ಬಾಲಕ ತನ್ನ ಶಾಲಾ ಬ್ಯಾಗ್‌ನಲ್ಲಿ ಬಂದೂಕನ್ನು ಬಚ್ಚಿಟ್ಟುಕೊಂಡು ಶಾಲೆಗೆ ಬಂದಿದ್ದ. ನಂತರ 10 ವರ್ಷದ ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಆತನ ಕೈಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸಿದ ಬಾಲಕ ಹಾಗೂ ಆತನ ತಂದೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
‘ನನ್ನ ಪಾಡಿಗೆ ನಾನು ನನ್ನ ತರಗತಿಗೆ ಹೋಗುತ್ತಿದ್ದಾಗ ಅವನು ಬ್ಯಾಗ್‌ನಿಂದ ಬಂದೂಕನ್ನು ತೆಗೆದುಕೊಂಡು ನನ್ನ ಮೇಲೆ ಗುಂಡು ಹಾರಿಸಲು ಮುಂದಾದ. ನಾನು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅವನು ನನ್ನ ಕೈಗೆ ಗುಂಡು ಹಾರಿಸಿದ’ ಎಂದು ಆಸ್ಪತ್ರೆಯಲ್ಲಿರುವ ಗಾಯಾಳು ಬಾಲಕ ವಿಡಿಯೋದಲ್ಲಿ ಹೇಳಿದ್ದಾನೆ.
ಈ ದೊಡ್ಡ ನಿರ್ಲಕ್ಷ್ಯಕ್ಕೆ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಬಂದೂಕು ಹೇಗೆ ಸಿಕ್ಕಿತು, ಗುಂಡು ಹಾರಿಸಿದ್ದಕ್ಕೇ ಕಾರಣ ಏನು ಎಂಬುದು ತಿಳಿದುಬಂದಿಲ್ಲ.