ಇಡೀ ದೇಶ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿರುವಾಗಲೇ ಭಾರತಕ್ಕೆ ಅಮೆರಿಕ ಭಾರೀ ತೆರಿಗೆ ಶಾಕ್‌ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

ವಾಷಿಂಗ್ಟನ್‌: ಇಡೀ ದೇಶ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿರುವಾಗಲೇ ಭಾರತಕ್ಕೆ ಅಮೆರಿಕ ಭಾರೀ ತೆರಿಗೆ ಶಾಕ್‌ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಆ.26ರ ಮಧ್ಯರಾತ್ರಿ 12.01 ಗಂಟೆಯಿಂದಲೇ ಈ ಹೆಚ್ಚುವರಿ ತೆರಿಗೆ ಅನುಷ್ಠಾನಕ್ಕೆ ಬರಲಿದೆ.

ಈಗಾಗಲೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಶೇ.25ರಷ್ಟು ತೆರಿಗೆ ಹೇರಿದೆ. ಇದೀಗ ಹೆಚ್ಚುವರಿ ಶೇ.25ರಷ್ಟು ತೆರಿಗೆಯಿಂದಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಒಟ್ಟಾರೆ ಶೇ.50ರಷ್ಟು ತೆರಿಗೆ ಹೊರೆ ಬಿದ್ದಂತಾಗಲಿದೆ. ಭಾರತದಿಂದ ರಫ್ತಾಗುವ ಶೇ.66ರಷ್ಟು ಉತ್ಪನ್ನಗಳ ಮೇಲೆ ತೆರಿಗೆಯ ಕಾರ್ಮೋಡ ಬೀಳಲಿದೆ. ಅಂದರೆ ಸುಮಾರು 4 ಲಕ್ಷ ಕೋಟಿ ರು. ಮೌಲ್ಯದ ರಫ್ತಿನ ಮೇಲೆ ಹೊಡೆತ ಬೀಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಉಕ್ರೇನ್ ಜತೆ ಸಂಘರ್ಷ ನಿರತ ರಷ್ಯಾದಿಂದ ಭಾರತ ತೈಲ ಖರೀದಿ ಮುಂದುವರಿಸಿದೆ. ಈ ಮೂಲಕ ರಷ್ಯಾದ ಯುದ್ಧೋನ್ಮಾದಕ್ಕೆ ಭಾರತ ನೆರವು ನೀಡುತ್ತಿದೆ ಎಂದು ಆರೋಪಿಸಿ ಆ.7ರಂದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸುವ ಬೆದರಿಕೆವೊಡ್ಡಿದ್ದರು. ಈ ಕುರಿತ ಮಾತುಕತೆಗಾಗಿ 21 ದಿನಗಳ ಕಾಲಾವಕಾಶವನ್ನೂ ನೀಡಿದ್ದರು. ಮಾತುಕತೆ ಅವಧಿ ಮುಗಿಯುತ್ತಿದ್ದಂತೆ ಇದೀಗ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಅಧಿಸೂಚನೆ ಹೊರಡಿಸಿದ್ದಾರೆ.

ಟ್ರಂಪ್‌ ಅವರ ತೆರಿಗೆ ನೀತಿಯಿಂದ ತೀವ್ರ ಪೆಟ್ಟು ತಿಂದ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದು. ಬ್ರೆಜಿಲ್‌ ಮೇಲೆಯೂ ಅಮೆರಿಕ ಈಗಾಗಲೇ ಶೇ.50ರಷ್ಟು ತೆರಿಗೆ ವಿಧಿಸಿದೆ.

ಯಾರಿಗೆ ಹೊರೆ?:

ಜವುಳಿ, ಹರಳುಗಳು ಮತ್ತು ಆಭರಣಗಳು, ಫರ್ನಿಚರ್‌ಗಳು, ಕಾರ್ಪೆಟ್‌ಗಳು, ಯಂತ್ರೋಪಕರಣಗಳು, ಸಿಗಡಿ, ಇತರ ಸಮುದ್ರ ಉತ್ಪನ್ನಗಳು, ಚರ್ಮದ ಉದ್ಯಮದ ಮೇಲೆ ತೆರಿಗೆ ಹೊರೆ ಬೀಳಲಿದೆ.

ಪರಿಣಾಮ ಏನು?:

ಸುಮಾರು 17 ಸಾವಿರ ಕೋಟಿ ರು. ಮೌಲ್ಯದ ಸಿಗಡಿ, 94 ಸಾವಿರ ಕೋಟಿ ರು.ನಷ್ಟು ಜವಳಿ ಉತ್ಪನ್ನಗಳ ಮೇಲೆ ಇದರಿಂದ ಗಂಭೀರ ಪರಿಣಾಮ ಬೀರಲಿದೆ. ಬೆಂಗಳೂರು, ಎನ್‌ಸಿಆರ್‌, ತಿರುಪೂರು, ಗುಜರಾತ್‌ನ ಜವಳಿ ಉದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬೀಳಲಿದೆ. ಇಷ್ಟೇ ಅಲ್ಲದೆ, ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳ ಮೇಲೆ ಇದು ತೀವ್ರ ನೇರ ಹೊರೆ ಬೀಳಲಿದೆ. ಬೇಡಿಕೆ ಕುಸಿತದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಲಿದೆ. ಆರ್ಥಿಕ ತಜ್ಞರ ಪ್ರಕಾರ ಅಮೆರಿಕದ ಶೇ.50ರಷ್ಟು ತೆರಿಗೆಯಿಂದ ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಗೆ ಶೇ.0.2ರಿಂದ 1ರಷ್ಟು ಹೊಡೆತ ಬೀಳುವ ನಿರೀಕ್ಷೆ ಇದೆ.

ಭಾರತಕ್ಕೆ ನಷ್ಟ, ಪ್ರತಿಸ್ಪರ್ಧಿಗಳಿಗೆ ಲಾಭ?

ಶೇ.50ರಷ್ಟು ತೆರಿಗೆಯಿಂದಾಗಿ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಪ್ರತಿಸ್ಪರ್ಧಿ ದೇಶಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಮ್ಯಾನ್ಮಾರ್‌(ಶೇ.40), ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ (ಶೇ.36), ಬಾಂಗ್ಲಾದೇಶ (ಶೇ.35), ಇಂಡೋನೇಷ್ಯಾ(ಶೇ.32), ಚೀನಾ ಮತ್ತು ಶ್ರೀಲಂಕಾ(ಶೇ.30), ಮಲೇಷ್ಯಾ(ಶೇ.25) ಮತ್ತು ಫಿಲಿಪ್ಪೀನ್ಸ್‌ ಮತ್ತು ವಿಯೆಟ್ನಾಂ(ಶೇ.20)ಗಳ ಮೇಲೆ ಭಾರತಕ್ಕಿಂತ ಕಡಿಮೆ ತೆರಿಗೆ ವಿಧಿಸಲಾಗಿದೆ. ಇದರಿಂದ ಅಮೆರಿಕದ ಕಂಪನಿಗಳು ತಮ್ಮ ಬೇಡಿಕೆ ಪೂರೈಕೆಗೆ ಈದೇಶಗಳತ್ತ ಮುಖಮಾಡುವ ಸಾಧ್ಯತೆ ಇದೆ.

ಯಾವ ವಸ್ತುಗಳ ಮೇಲೆ ತೆರಿಗೆ

ಜವಳಿ, ಹರಳು, ಆಭರಣಗಳು, ಫರ್ನಿಚರ್‌, ಕಾರ್ಪೆಟ್‌, ಯಂತ್ರೋಪಕರಣ, ಸಿಗಡಿ, ಸಮುದ್ರ ಉತ್ಪನ್ನಗಳು, ಚರ್ಮ ಉತ್ಪನ್ನ

ಯಾವ ವಸ್ತುಗಳಿಗೆ ವಿನಾಯ್ತಿ?

ಔಷಧ, ಉಕ್ಕು, ಅಲ್ಯುಮಿನಿಯಂ, ತಾಮ್ರದ ವಸ್ತುಗಳು, ಪ್ಯಾಸೆಂಜರ್‌ ಕಾರು, ಕಡಿಮೆ ಸಾಮರ್ಥ್ಯದ ಟ್ರಕ್‌, ಆಟೋ ಬಿಡಿಭಾಗಗಳು, ಔಷಧ, ಎಲೆಕ್ಟ್ರಾನಿಕ್ಸ್‌ ಉಪಕರಣ.

- ಭಾರತೀಯ ಉತ್ಪನ್ನಗಳ ಮೇಲೆ ದುಪ್ಪಟ್ಟು ತೆರಿಗೆ । ಅಮೆರಿಕಕ್ಕೆ ವಸ್ತುಗಳ ರಫ್ತು ದುಬಾರಿ

- ರಫ್ತಿನಲ್ಲಿ ಶೇ.66ರಷ್ಟು ವಸ್ತುಗಳ ಮೇಲೆ ಅಧಿಕ ತೆರಿಗೆ ಹೊರೆ । ಭಾರತದ ಉದ್ಯಮಕ್ಕೆ ನಷ್ಟ

- ರಷ್ಯಾ ತೈಲ ಖರೀದಿ ಮಾಡುತ್ತಿರುವುದಕ್ಕೆ ಶೇ.25ರಷ್ಟು ಹೆಚ್ಚುವರಿಗೆ ತೆರಿಗೆ ಹಾಕಿರುವ ಟ್ರಂಪ್‌

- ಭಾರತದ 4 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ದಾಳಿಯ ಪರಿಣಾಮ