ಸಾರಾಂಶ
ನವದೆಹಲಿ: ಉತ್ತರ ಭಾರತದಲ್ಲಿ ಉಷ್ಣಹವೆ ಮುಂದುವರೆದಿದ್ದು, ರಾಷ್ಟ್ರಾದ್ಯಂತ ಉಷ್ಣಹವೆಗೆ ಕಳೆದ 24 ತಾಸಿನಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದ 20 ಚುನಾವಣಾ ಸಿಬ್ಬಂದಿ ಸೇರಿದಂತೆ 54 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಶನಿವಾರದ ಚುನಾವಣೆ ಮೇಲೆ ಕೊಂಚ ಪರಿಣಾಮ ಆಗುವ ಸಾಧ್ಯತೆ ಇದೆ.
ಬಿಹಾರದಲ್ಲಿ ಅತಿ ಹೆಚ್ಚು ಎಂದರೆ 32 ಮಂದಿ ಉಷ್ಣಹವೆಯಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಔರಂಗಾಬಾದ್‌ನಲ್ಲಿ 17 ಮಂದಿ, ಅರ್ರಾಹ್‌ನಲ್ಲಿ 6, ಗಯಾ ಮತ್ತು ರೋಹ್ತಾಸ್‌ನಲ್ಲಿ ತಲಾ 3 ಮಂದಿ, ಬಕ್ಸರ್‌ನಲ್ಲಿ ಇಬ್ಬರು ಮತ್ತು ಪಟನಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇವರಲ್ಲಿ ಚುನಾವಣಾ ಸಿಬ್ಬಂದಿಯೇ 10 ಜನರಿದ್ದಾರೆ. ಇನ್ನು ಒಡಿಶಾದ ರೂರ್ಕೆಲಾದಲ್ಲಿ 10, ಜಾರ್ಖಂಡ್‌ನ ಪಲಮು ಮತ್ತು ರಾಜಸ್ಥಾನದಲ್ಲಿ ತಲಾ ಐವರು ಸಾವನ್ನಪ್ಪಿದ್ದರೆ, ಉತ್ತರ ಪ್ರದೇಶದಲ್ಲಿ ಹಲವರು ಉಷ್ಣಹವೆಗೆ ಮೃತಪಟ್ಟಿದ್ದಾರೆ.
ಶುಕ್ರವಾರ ರಾಜಧಾನಿ ದೆಹಲಿ, ಬಿಹಾರ, ಒಡಿಶಾ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ, ಚಂಡೀಗಢ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ 45 ರಿಂದ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜೂ.1 ರಂದು ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಧೂಳಿನ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ. ಜೂ.1 ಮತ್ತು 2 ರಂದು ವಾಯುವ್ಯ ಭಾರತದ ಭಾಗದಲ್ಲಿ ಗುಡುಗು ಮತ್ತು ಮಿಂಚು ಸಮೇತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.